×
Ad

Madhya Pradesh | 'ಕ್ಲೀನ್ ಸಿಟಿ' ಇಂದೋರ್‌ ನಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆಯಲ್ಲಿ ಗೊಂದಲ; ಸ್ಥಳೀಯರು 13, ಮೇಯರ್ 7, ಸಿಎಂ 4!

Update: 2026-01-01 20:50 IST

Photo Credit : Credit: X/@DrMohanYadav51


ಇಂದೋರ್, ಜ. 1: ಇಲ್ಲಿನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆಯ ಕುರಿತಂತೆ ಅಧಿಕಾರಿಗಳು ಹಾಗೂ ಸ್ಥಳೀಯರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕಲುಷಿತ ನೀರು ಸೇವನೆಯಿಂದ ವಾಂತಿ ಹಾಗೂ ಅತಿಸಾರ ಹರಡಿ 6 ತಿಂಗಳ ಮಗು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಪ್ರತಿಪಾದಿಸಿದ್ದಾರೆ.

ಈ ನಡುವೆ ಸಂತ್ರಸ್ತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಸಾವನ್ನಪ್ಪಿದವರ ಸಂಖ್ಯೆ ನಾಲ್ಕು ಎಂದು ಹೇಳಿದ್ದಾರೆ. ಗಂಟೆಗಳ ಬಳಿಕ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ 7 ಮಂದಿ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.

ಸೋರಿಕೆಯಿಂದಾಗಿ ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಪ್ರವೇಶಿಸಿದೆ. ಇದು ಭಗೀರಥಪುರದಲ್ಲಿ ರೋಗ ಹರಡಲು ಕಾರಣವಾಯಿತು ಎಂದು ಪ್ರಾಥಮಿಕ ಅಂದಾಜು ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಖಾತೆ ಸಚಿವ ಕೈಲಾಸ್ ವಿಜಯವರ್ಗೀಯ ಅವರ ಇಂದೋರ್–1 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಗೀರಥಪುರ ಇದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯವರ್ಗೀಯ ಅವರು, 1,400ರಿಂದ 1,500 ಜನರಿಗೆ ರೋಗ ತಗುಲಿದೆ. ಇವರಲ್ಲಿ ಸುಮಾರು 200 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ.

ವಿಭಿನ್ನ ಸಾವಿನ ಸಂಖ್ಯೆ ಕುರಿತಂತೆ ವಿಜಯವರ್ಗೀಯ,

‘‘ವಾಂತಿ ಹಾಗೂ ಅತಿಸಾರದಿಂದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಆಡಳಿತಾಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ. ಆದರೆ ಅಲ್ಲಿ 8ರಿಂದ 9 ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ. ಮಾಹಿತಿಯನ್ನು ಪರಿಶೀಲಿಸಲಾಗುವುದು. ಇದು ಸರಿಯೆಂದು ತಿಳಿದು ಬಂದರೆ, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಮೋಹನ್ ಯಾದವ್ ಘೋಷಿಸಿದಂತೆ ಪರಿಹಾರ ನೀಡಲಾಗುವುದು’’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News