×
Ad

ಗರ್ಭಪಾತಕ್ಕೆ ಮಹಿಳೆ ಒಪ್ಪಿದ್ರೆ ಸಾಕು: ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತೀರ್ಪು

Update: 2026-01-01 22:20 IST

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ | Photo Credit : PTI 

ಹೊಸದಿಲ್ಲಿ, ಜ. 1: ಗರ್ಭಪಾತಕ್ಕೆ ಮಹಿಳೆಯ ಇಚ್ಛೆ ಮತ್ತು ಒಪ್ಪಿಗೆಯಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಗಂಡನ ಒಪ್ಪಿಗೆಯಿಲ್ಲದೆ ಗರ್ಭಪಾತ ನಡೆಸಲು ಮಹಿಳೆಯೊಬ್ಬರಿಗೆ ಅನುಮತಿ ನೀಡಿದೆ.

ತನ್ನ 16 ವಾರಗಳ ಗರ್ಭವನ್ನು ಕೊನೆಗೊಳಿಸಲು ಅನುಮತಿ ಕೋರಿ ಪಂಜಾಬ್‌ನ 21 ವರ್ಷದ ಮಹಿಳೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ.

‘ನಾನು 2025ರ ಮೇ 2ರಂದು ಮದುವೆಯಾದೆ ಹಾಗೂ ಗಂಡನೊಂದಿಗಿನ ನನ್ನ ಸಂಬಂಧ ಚೆನ್ನಾಗಿರಲಿಲ್ಲ’ ಎಂದು ಮಹಿಳೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಹಿಂದಿನ ವಿಚಾರಣೆಯಲ್ಲಿ, ಮಹಿಳೆಯ ತಪಾಸಣೆ ಮಾಡಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.ಗರ್ಭಪಾತಕ್ಕೆ ಒಳಗಾಗಲು ಮಹಿಳೆಯು ವೈದ್ಯಕೀಯವಾಗಿ ಸಮರ್ಥರಾಗಿದ್ದಾರೆ ಎಂದು ವೈದ್ಯಕೀಯ ವರದಿ ಹೇಳಿದೆ.

ಅರ್ಜಿದಾರೆಯು ಗರ್ಭಪಾತಕ್ಕೆ ಒಳಗಾಗಲು ವೈದ್ಯಕೀಯವಾಗಿ ಸಮರ್ಥರಾಗಿದ್ದಾರೆ ಎನ್ನುವುದು ಪರಿಣಿತರ ವರದಿಯಿಂದ ತಿಳಿದುಬರುತ್ತದೆ ಎಂದು ನ್ಯಾ. ಸುವಿರ್ ಸೆಹಗಲ್ ಅವರ ನ್ಯಾಯಪೀಠ ಹೇಳಿದೆ.

ಇಲ್ಲಿ ಪರಿಗಣಿಸಬೇಕಾಗಿರುವ ಏಕೈಕ ಪ್ರಶ್ನೆಯೆಂದರೆ, ಗರ್ಭಪಾತಕ್ಕೆ ಮಹಿಳೆಯ ಪರಿತ್ಯಕ್ತ ಗಂಡನ ಒಪ್ಪಿಗೆ ಬೇಕೇ ಎನ್ನುವುದಾಗಿದೆ ಎಂದು ನ್ಯಾಯಾಲಯ ಹೇಳಿತು.

1971ರ ವೈದ್ಯಕೀಯ ಗರ್ಭಪಾತ ಕಾಯ್ದೆಯು ಗರ್ಭಪಾತಕ್ಕೆ ಗಂಡನ ಒಪ್ಪಿಗೆ ಬೇಕೆಂದು ಹೇಳುವುದಿಲ್ಲ ಎನ್ನುವುದರತ್ತ ನ್ಯಾಯಾಲಯ ಬೆಟ್ಟು ಮಾಡಿದೆ.

“ತನ್ನ ಗರ್ಭವನ್ನು ಮುಂದುವರಿಸುವುದೇ ಅಥವಾ ಕೊನೆಗೊಳಿಸುವುದೇ ಎನ್ನುವುದನ್ನು ನಿರ್ಧರಿಸಲು ವಿವಾಹಿತ ಮಹಿಳೆಯೇ ಅತ್ಯುತ್ತಮ ನ್ಯಾಯಾಧೀಶರು. ಅವರ ಇಚ್ಛೆ ಮತ್ತು ಒಪ್ಪಿಗೆ ಮಾತ್ರ ಮುಖ್ಯವಾದುದು” ಎಂದು ನ್ಯಾಯಾಲಯ ಹೇಳಿತು.

“ಹಾಗಾಗಿ, ಗರ್ಭಪಾತಕ್ಕೆ ಒಳಗಾಗಲು ಮಹಿಳೆಗೆ ಅನುಮತಿ ನೀಡುವಲ್ಲಿ ನ್ಯಾಯಾಲಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಅವರು ಯಾವುದೇ ಆಸ್ಪತ್ರೆಯಲ್ಲಿ ಗರ್ಭಪಾತಕ್ಕೆ ಒಳಗಾಗಲು ಅರ್ಹರಾಗಿದ್ದಾರೆ ಎಂಬುದಾಗಿ ನಿರ್ದೇಶನ ನೀಡಲಾಗಿದೆ” ಎಂದು ಡಿಸೆಂಬರ್ 24ರಂದು ನೀಡಲಾಗಿರುವ ಆದೇಶದಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News