ಭಾರತ–ಪಾಕ್ ನಿಂದ ಅಣುಸ್ಥಾವರಗಳು, ಕೈದಿಗಳ ಪಟ್ಟಿ ವಿನಿಮಯ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಜ. 1: ಪರಸ್ಪರರ ಅಣುಸ್ಥಾವರಗಳ ಮೇಲೆ ದಾಳಿ ನಡೆಸದಂತೆ ಉಭಯ ದೇಶಗಳನ್ನು ನಿರ್ಬಂಧಿಸುವ ದ್ವಿಪಕ್ಷೀಯ ಒಪ್ಪಂದದಡಿ ಭಾರತ ಹಾಗೂ ಪಾಕಿಸ್ತಾನ ಗುರುವಾರ ತಮ್ಮಲ್ಲಿನ ಅಣುಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಕಳೆದ ಮೂರು ದಶಕಗಳಿಂದ ಹೊಸ ವರ್ಷದ ಆರಂಭದಲ್ಲಿ ಎರಡೂ ದೇಶಗಳು ತಮ್ಮ ಅಣುಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿವೆ.
ಕಳೆದ ಮೇ ತಿಂಗಳಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಬಳಿಕ ಭಾರತವು ಪಾಕಿಸ್ತಾನ ವಿರುದ್ಧ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಎರಡೂ ದೇಶಗಳ ಬಾಂಧವ್ಯ ಶಿಥಿಲಗೊಂಡಿರುವ ನಡುವೆಯೂ ಅಣುಸ್ಥಾವರಗಳ ಪಟ್ಟಿಯ ವಿನಿಮಯ ನಡೆದಿದೆ.
ಅಣುಸ್ಥಾವರಗಳು ಹಾಗೂ ಸಂಸ್ಥಾಪನೆಗಳ ವಿರುದ್ಧ ದಾಳಿಯನ್ನು ನಿಷೇಧಿಸುವ ಕುರಿತ ಒಪ್ಪಂದದ ನಿಯಮಗಳಡಿ ಈ ವಿನಿಮಯ ನಡೆದಿದೆ. ಹೊಸದಿಲ್ಲಿ ಹಾಗೂ ಇಸ್ಲಾಮಾಬಾದ್ ನಲ್ಲಿರುವ ರಾಜತಾಂತ್ರಿಕ ವಾಹಿನಿಗಳ ಮೂಲಕ ಇದನ್ನು ಏಕಕಾಲದಲ್ಲಿ ನಡೆಸಲಾಗಿದೆ.
ಪರಸ್ಪರರ ಅಣುಸ್ಥಾವರಗಳು ಹಾಗೂ ಅಣುಸೌಕರ್ಯಗಳ ಮೇಲೆ ದಾಳಿ ನಡೆಸುವುದನ್ನು ನಿಷೇಧಿಸುವ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನವು 1988ರ ಡಿಸೆಂಬರ್ 31ರಂದು ಸಹಿ ಹಾಕಿದ್ದವು. 1991ರ ಜನವರಿ 27ರಂದು ಅದು ಅನುಷ್ಠಾನಕ್ಕೆ ಬಂದಿತ್ತು.
*ನಾಗರಿಕ ಕೈದಿಗಳ ವಿವರಗಳ ವಿನಿಮಯ
ಪರಸ್ಪರರ ವಶದಲ್ಲಿರುವ 391 ನಾಗರಿಕ ಕೈದಿಗಳು ಹಾಗೂ 33 ಮಂದಿ ಮೀನುಗಾರರ ವಿವರಗಳನ್ನು ಭಾರತ ಹಾಗೂ ಪಾಕಿಸ್ತಾನಗಳು ತಮ್ಮ ರಾಜತಾಂತ್ರಿಕ ವಾಹಿನಿಗಳ ಮೂಲಕ ವಿನಿಮಯ ಮಾಡಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದೇ ವೇಳೆ ಪಾಕಿಸ್ತಾನವು ತನ್ನ ಕಸ್ಟಡಿಯಲ್ಲಿರುವ 58 ಮಂದಿ ನಾಗರಿಕ ಕೈದಿಗಳು ಹಾಗೂ 199 ಮಂದಿ ಮೀನುಗಾರರ ವಿವರಗಳನ್ನು ಹಂಚಿಕೊಂಡಿದೆ.
ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ತನ್ನ ದೇಶದ ನಾಗರಿಕರು, ಮೀನುಗಾರರು ಹಾಗೂ ನಾಪತ್ತೆಯಾದ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಅವರ ದೋಣಿಗಳೊಂದಿಗೆ ಬಿಡುಗಡೆಗೊಳಿಸುವಂತೆ ಭಾರತ ಸರಕಾರ ಕರೆ ನೀಡಿದೆ.