×
Ad

ವಿದೇಶಿಯರ ಗುರುತನ್ನು ಅವರ ದೇಶ ಪರಿಶೀಲಿಸುವವರೆಗೆ ಗಡಿಪಾರು ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ

Update: 2025-02-14 17:47 IST

ಸುಪ್ರೀಂ ಕೋರ್ಟ್ | PTI  

ಹೊಸದಿಲ್ಲಿ: ವಿದೇಶಿಯರು ಮತ್ತು ಅಕ್ರಮ ವಲಸಿಗರು ಶಿಕ್ಷೆಯನ್ನು ಪೂರೈಸಿದ ತಕ್ಷಣ ಅವರನ್ನು ಅವರ ದೇಶಗಳಿಗೆ ಗಡಿಪಾರು ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಪ್ರಕ್ರಿಯೆಯು ಅವರ ದೇಶಗಳು ಅವರ ಗುರುತುಗಳನ್ನು ಪರಿಶೀಲಿಸುವುದನ್ನು ಮತ್ತು ವಾಪಸಾತಿಗಾಗಿ ಪ್ರಯಾಣ ದಾಖಲೆಗಳನ್ನು ಒದಗಿಸುವುದನ್ನು ಒಳಗೊಂಡಿದೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಆತ/ಆಕೆ ಮಾನ್ಯವಾದ ಪ್ರಯಾಣ ದಾಖಲೆಗಳನ್ನು ಹೊಂದಿಲ್ಲದಿದ್ದರೆ ಅವರನ್ನು ಗಡಿಪಾರು ಮಾಡುವ ಮುನ್ನ ಸಂಬಂಧಿಸಿದ ದೇಶದ ರಾಯಭಾರ ಕಚೇರಿಯಿಂದ ರಾಷ್ಟ್ರೀಯತೆ ಪರಿಶೀಲನೆ ಪ್ರಕ್ರಿಯೆಯ ಮೂಲಕ ಅಗತ್ಯ ಪ್ರಯಾಣ ದಾಖಲೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯವು ಗುರುವಾರ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ವಿದೇಶಿ ವಿಳಾಸದ ಕೊರತೆಯು ವಿದೇಶಿಯರನ್ನು ಅವರ ದೇಶಗಳಿಗೆ ಗಡಿಪಾರು ಮಾಡುವುದನ್ನು ವಿಳಂಬಿಸಲು ಕಾರಣವಾಗುವುದಿಲ್ಲ ಎಂದು ಕಳೆದ ವಾರ ಕೇಂದ್ರಕ್ಕೆ ತಿಳಿಸಿದ್ದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಉಜ್ಜಲ ಭುಯಾನ್ ಅವರ ಪೀಠವು,‘ವಿಳಾಸವಿಲ್ಲದೆ ನೀವು(ಸರಕಾರ) ಅವರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ನಮಗೆ ತೋರಿಸಿ. ನೀವು ಅವರನ್ನು ಅನಿರ್ದಿಷ್ಟವಾಗಿ ಬಂಧನದಲ್ಲಿರಿಸಲು ಸಾಧ್ಯವಿಲ್ಲ. ಅವರು ನಿರ್ದಿಷ್ಟ ದೇಶವೊಂದಕ್ಕೆ ಸೇರಿದವರು ಎನ್ನುವುದು ನಿಮಗೆ ಗೊತ್ತಿದ್ದರೆ ಅವರೆಲ್ಲಿಗೆ ಹೋಗಬೇಕು ಎನ್ನುವುದನ್ನು ಆ ದೇಶವು ನಿರ್ಧರಿಸಬೇಕು. ನೀವೇ ಹಿಂದೇಟು ಹೊಡೆಯುತ್ತಿದ್ದೀರಿ ’ಎಂದು ಹೇಳಿತ್ತು.

ರಾಷ್ಟ್ರೀಯತೆ ಪರಿಶೀಲನೆಯು ವಿದೇಶಿ ಸರಕಾರದ ಸಾರ್ವಭೌಮ ಕಾರ್ಯವಾಗಿದೆ ಮತ್ತು ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಡುವನ್ನು ನಿಗದಿಗೊಳಿಸಲು ಸಾಧ್ಯವಿಲ್ಲ ಎಂದೂ ಗೃಹ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News