ವಿಪಕ್ಷಗಳ ಗದ್ದಲದ ನಡುವೆ ಅರಣ್ಯ ಸಂರಕ್ಷಣೆ (ತಿದ್ದುಪಡಿ) ಕಾಯಿದೆಗೆ ಲೋಕಸಭೆಯ ಅಂಗೀಕಾರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಕುರಿತಂತೆ ಪ್ರಧಾನಿ ಹೇಳಿಕೆ ನೀಡಬೇಕೆಂದು ಪಟ್ಟುಹಿಡಿದಿರುವ ವಿಪಕ್ಷಗಳ ಗದ್ದಲ ಹಾಗೂ ಪ್ರತಿಭಟನೆಗಳ ನಡುವೆ ಬುಧವಾರ ವಿವಾದಿತ ಅರಣ್ಯ ಸಂರಕ್ಷಣೆ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ. ಅರಣ್ಯ ಭೂಮಿಯಲ್ಲಿ ಕೆಲವೊಂದು ನಿರ್ಮಾಣಗಳಿಗೆ ವಿನಾಯಿತಿಯೊದಗಿಸುವ ಈ ತಿದ್ದುಪಡಿ ಮಸೂದೆ ಈಗಾಗಲೇ ಸಾಕಷ್ಟು ವಿವಾದಕ್ಕೀಡಾಗಿದೆ.
ಈ ಮಸೂದೆಯನ್ನು ಮಾರ್ಚ್ ತಿಂಗಳಿನಲ್ಲಿ ಜಂಟಿ ಸಂಸದೀಯ ಸಮಿತಿಯ ಮುಂದಿಡಲಾಗಿದ್ದರೆ ಮೇ ತಿಂಗಳಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಲಾಗಿತ್ತು. ಪರಿಸರ ಸಚಿವಾಲಯ ಪ್ರಸ್ತಾಪಿಸಿದ್ದ ಎಲ್ಲಾ ತಿದ್ದುಪಡಿಗಳಿಗೂ ಸಂಸದೀಯ ಸಮಿತಿ ಒಪ್ಪಿಗೆ ನೀಡಿದ್ದರೆ ಸಮಿತಿಯ ನಾಲ್ಕು ವಿಪಕ್ಷ ಸದಸ್ಯರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
“ದೇಶದಲ್ಲಿ ಎಡಪಂಥೀಯ ತೀವ್ರವಾದದಿಂದ ಬಾಧಿತವಾಗಿರುವ ಕೆಲವೊಂದು ಪ್ರದೇಶಗಳಲ್ಲಿ ಈಗಿನ ಕಾನೂನಿನಲ್ಲಿರುವ ಕೆಲವೊಂದು ನಿರ್ಬಂಧಗಳಿಂದ ಅಭಿವೃದ್ಧಿ ಸ್ಥಗಿತಗೊಂಡಿದೆ. ಈ ಪ್ರದೇಶಗಳಿಗೆ ತಲುಪಲು ಅಗತ್ಯ ಮೂಲಭೂತ ಸೌಕರ್ಯ ಯೋಜನೆಗಳ ಅಗತ್ಯವಿದೆ. ಗಡಿಗಳಿಂದ, ಚೀನಾ ಜೊತೆಗಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಹಾಗೂ ಪಾಕಿಸ್ತಾನ ಜೊತೆಗಿನ ಗಡಿ ನಿಯಂತ್ರಣ ರೇಖೆಯಿಂದ 100 ಕಿಮೀ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಈ ತಿದ್ದುಪಡಿ ಮಸೂದೆಯಿಂದ ದೊರೆಯುವ ವಿನಾಯಿತಿಯಿಂದ ಗಡಿ ಪ್ರದೇಶಗಳಿಗೆ ತೆರಳಲು ಅಗತ್ಯವಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಬಹುದು ಹಾಗೂ ರಾಷ್ಟ್ರೀಯ ಭದ್ರತೆಗೆ ಅಗತ್ಯವಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಸಾಧ್ಯ,” ಎಂದು ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದರು.
ಜಂಟಿ ಸಂಸದೀಯ ಸಮಿತಿ ಈ ಮಸೂದೆಯನ್ನು ಪರಿಶೀಲಿಸಿದೆ ಎಂದು ಅವರು ಹೇಳಿದರು.
ಈ ಮಸೂದೆಯನ್ನು ಅಂಗೀಕರಿಸದಂತೆ ಇತ್ತೀಚೆಗಷ್ಟೇ ಸಚಿವರಿಗೆ ಮತ್ತು ಸಂಸದರಿಗೆ ದೇಶದ 400ಕ್ಕೂ ಅಧಿಕ ಪರಿಸರವಾದಿಗಳು ವಿಜ್ಞಾನಿಗಳು ಪತ್ರ ಬರೆದಿದ್ದರು.
ಅರಣ್ಯ ಜಮೀನನ್ನು ವಾಣಿಜ್ಯ ಉದ್ದೇಶಗಳಿಗೆ ಒದಗಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ವಿಪಕ್ಷಗಳ ಹಲವು ಸದಸ್ಯರು ಹಾಗೂ ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಗಡಿಯಿಂದ 100 ಕಿಮೀ ಒಳಗಿನ ಪ್ರದೇಶಗಳಲ್ಲಿ ಭದ್ರತೆಗೆ ಸಂಬಂಧಿಸಿದ ಯೋಜನೆಗಳಿಗಾಗಿ ಅರಣ್ಯ ಜಮೀನನ್ನು ಪಡೆಯಲು ಪೂರ್ವಾನುಮತಿ ಅಗತ್ಯವಿಲ್ಲ ಎಂದು ಈ ತಿದ್ದುಪಡಿ ಹೇಳುತ್ತದೆ. ಇದು ದೇಶದ ಸಂಪೂರ್ಣ ಈಶಾನ್ಯ ಭಾಗವನ್ನು ಹಾಗೂ ಹಿಮಾಲಯ ಭಾಗವನ್ನು ಒಳಗೊಳ್ಳಬಹುದು ಹಾಗೂ ಇದು ಪರಿಸರ ಸೂಕ್ಷ್ಮ ಮತ್ತು ಜೀವವೈವಿಧ್ಯತೆಯ ತಾಣವನ್ನು ಅಪಾಯಕ್ಕೊಡ್ಡಿದಂತೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.