×
Ad

10 ವರ್ಷಗಳಲ್ಲಿ 1.73 ಲಕ್ಷ ಹೆಕ್ಟೇರ್‌ಗೂ ಅಧಿಕ ಅರಣ್ಯಭೂಮಿ ಅನ್ಯ ಉದ್ದೇಶಗಳಿಗೆ ಬಳಕೆ: ಕೇಂದ್ರ ಸರಕಾರ

Update: 2025-07-22 21:54 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: 2014-15 ಮತ್ತು 2023-14ರ ನಡುವೆ 1,73,984.3 ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸಲು ಕೇಂದ್ರ ಪರಿಸರ ಸಚಿವಾಲಯವು ಅನುಮೋದನೆ ನೀಡಿದೆ ಎಂದು ಸಹಾಯಕ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಕೀರ್ತಿವರ್ಧನ ಸಿಂಗ್ ಅವರು ಸೋಮವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಪೈಕಿ ಗಣಿಗಾರಿಕೆ ಮತ್ತು ಕ್ವಾರಿ ಕೇತ್ರಕ್ಕೆ 40,096.17 ಹೆ.,ಜಲವಿದ್ಯುತ್ ಕ್ಷೇತ್ರ ಮತ್ತು ನೀರಾವರಿ ಕ್ಷೇತ್ರಕ್ಕೆ 40,138.31 ಹೆ. ಮತ್ತು ರಸ್ತೆ ಯೋಜನೆಗಳಿಗೆ 30,605.69 ಹೆ.ಅರಣ್ಯ ಭೂಮಿ ಬಳಕೆಯಾಗಿದ್ದು,ಈ ಮೂರು ಕ್ಷೇತ್ರಗಳು ಒಟ್ಟು ಶೇ.63ರಷ್ಟು ಸಿಂಹಪಾಲನ್ನು ಹೊಂದಿವೆ.

ಕಾಂಗ್ರೆಸ್ ಸಂಸದ ಸುಖದೇವ ಭಗತ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು. ವಿಜ್ಞಾನ ಮತ್ತು ಪರಿಸರ ಕೇಂದ್ರದ ವರದಿಯನ್ನು ಉಲ್ಲೇಖಿಸಿದ್ದ ಭಗತ್, 2014ರಿಂದ 2023ರವರೆಗೆ ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಿಗೆ ಅರಣ್ಯ ಭೂಮಿ ಬಳಕೆಗೆ ಅನುಮೋದನೆಗಳಲ್ಲಿ ಶೇ.150ಕ್ಕೂ ಅಧಿಕ ಏರಿಕೆಯಾಗಿದೆಯೇ ಎಂದು ಪ್ರಶ್ನಿಸಿದ್ದರು.

ಪರ್ಯಾಯ ಅರಣ್ಯ ಅಭಿವೃದ್ಧಿ ಮತ್ತು ನಿವ್ವಳ ಪ್ರಸ್ತುತ ಮೌಲ್ಯ ಪಾವತಿ ಸೇರಿದಂತೆ ಸಾಕಷ್ಟು ಉಪಶಮನ ಕ್ರಮಗಳೊಂದಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅರಣ್ಯೇತರ ಉದ್ದೇಶಗಳಿಗೆ ಅರಣ್ಯ ಭೂಮಿಯ ಬಳಕೆಗೆ ಅವಕಾಶ ನೀಡಲಾಗಿದೆ ಎಂದೂ ಸಿಂಗ್ ತನ್ನ ಉತ್ತರದಲ್ಲಿ ತಿಳಿಸಿದರು.

ವಿದ್ಯುತ್ ಪ್ರಸರಣ ಮಾರ್ಗಗಳಂತಹ ರೇಖೀಯ ಮೂಲಸೌಕರ್ಯ ಯೋಜನೆಗಳಿಗೆ 17,232.69 ಹೆ.,ರಕ್ಷಣಾ ಯೋಜನೆಗಳಿಗೆ 14,968.14 ಹೆ.,ರೈಲ್ವೆ ಯೋಜನೆಗಳಿಗೆ 7,998 ಹೆ.,ಉಷ್ಣ ವಿದ್ಯುತ್ ಕ್ಷೇತ್ರಕ್ಕೆ 2,644 ಹೆ.,ಇತರ ವರ್ಗಗಳಿಗೆ 9,669.85 ಮತ್ತು ಪವನ ವಿದ್ಯುತ್ ಕೇತ್ರಕ್ಕೆ 346.84 ಹೆ.ಅರಣ್ಯ ಭೂಮಿಗೆ ಪರಿಸರ ಸಚಿವಾಲಯವು ಅನುಮತಿ ನೀಡಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News