ಬೆಟ್ಟಿಂಗ್ ಆ್ಯಪ್ ಪ್ರಕರಣ: ಈಡಿಯೆದುರು ವಿಚಾರಣೆಗೆ ಹಾಜರಾದ ಸುರೇಶ್ ರೈನಾ
ಸುರೇಶ್ ರೈನಾ (Photo source: X)
ಹೊಸದಿಲ್ಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಬುಧವಾರ) ಮಾಜಿ ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಜಾರಿ ನಿರ್ದೇಶನಾಲಯದೆದುರು (ED) ವಿಚಾರಣೆಗೆ ಹಾಜರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
1xBet ಅಕ್ರಮ ಬೆಟ್ಟಿಂಗ್ ಆ್ಯಪ್ ಗೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಹಾಜರಾದ ಸುರೇಶ್ ರೈನಾ ಅವರಿಂದ ಜಾರಿ ನಿರ್ದೇಶನಾಲಯ ಹೇಳಿಕೆ ದಾಖಲಿಸಿಕೊಂಡಿತು ಎಂದು ಮೂಲಗಳು ಹೇಳಿವೆ.
38 ವರ್ಷದ ಮಾಜಿ ಭಾರತೀಯ ಕ್ರಿಕೆಟಿಗರಾದ ಸುರೇಶ್ ರೈನಾ ಈ ಆ್ಯಪ್ ಗೆ ಸಂಬಂಧಿಸಿದ ಕೆಲ ಪ್ರಚಾರಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ವಿಚಾರಣೆಯ ವೇಳೆ ಈ ಆ್ಯಪ್ ನೊಂದಿಗೆ ಅವರಿಗಿರುವ ಸಂಬಂಧದ ಕುರಿತು ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿತು ಎನ್ನಲಾಗಿದೆ.
ಅಸಂಖ್ಯಾತ ಜನರಿಗೆ ಹಾಗೂ ಹೂಡಿಕೆದಾರರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಎಸಗಿ, ಭಾರಿ ಪ್ರಮಾಣದ ತೆರಿಗೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಇಂತಹ ಅಕ್ರಮ ಬೆಟ್ಟಿಂಗ್ ಆ್ಯಪ್ ಗಳ ಕುರಿತು ದಾಖಲಾಗಿರುವ ವಿವಿಧ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.