ಐಎಂಎಫ್ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ RBI ಮಾಜಿ ಗವರ್ನರ್ ಊರ್ಜಿತ್ ಪಟೇಲ್ ನೇಮಕ
ಊರ್ಜಿತ್ ಪಟೇಲ್ (Photo: PTI)
ಹೊಸದಿಲ್ಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ.
ಸೆಪ್ಟೆಂಬರ್ 4, 2016ರಂದು ಊರ್ಜಿತ್ ಪಟೇಲ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ನ 24ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ವೈಯಕ್ತಿಕ ಕಾರಣಗಳನ್ನು ಮುಂದುಮಾಡಿ, ತಮ್ಮ ಅವಧಿ ಮುಕ್ತಾಯಗೊಳ್ಳುವುದಕ್ಕೂ ಮುನ್ನವೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ, ಅವರು ರಾಜೀನಾಮೆ ನೀಡಿದ ಮರುದಿನವಾದ ಡಿಸೆಂಬರ್ 10, 2018ರಂದು ಅವರ ಅಧಿಕಾರಾವಧಿ ಕೊನೆಗೊಂಡಿತ್ತು.
ಆರ್ಥಿಕ ತಜ್ಞ ಹಾಗ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಮೂರು ವರ್ಷಗಳ ಅವಧಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಆಗಸ್ಟ್ 28ರಂದು ಹೊರಡಿಸಿರುವ ಸಚಿವ ಸಂಪುಟದ ನೇಮಕಾತಿ ಸಮಿತಿ ಆದೇಶದಲ್ಲಿ ಹೇಳಲಾಗಿದೆ.
1990ರ ನಂತರ ತಮ್ಮ ಅಧಿಕಾರಾವಧಿ ಮುಗಿಯುವುದಕ್ಕೂ ಮುನ್ನವೇ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯಿಂದ ಕೆಳಗಿಳಿದ ಪ್ರಥಮ ವ್ಯಕ್ತಿ ಊರ್ಜಿತ್ ಪಟೇಲ್ ಆಗಿದ್ದಾರೆ. ಅವರು ಇದಕ್ಕೂ ಮುನ್ನ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸೇವೆ ಸಲ್ಲಿಸಿದ್ದರು.