ಪತ್ನಿ,ಮಗ ಸೇರಿದಂತೆ ಮೂವರ ಹತ್ಯೆ: ಮಾಜಿ ಯೋಧನಿಗೆ ಮರಣ ದಂಡನೆ
ಸಾಂದರ್ಭಿಕ ಚಿತ್ರ | PC : PTI
ಆಗ್ರಾ: 2014ರಲ್ಲಿ ತನ್ನ ಪತ್ನಿ ಮತ್ತು ಮಗ ಸೇರಿದಂತೆ ಮೂವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಮಾಜಿ ಯೋಧ ಮನೋಜ್ ಕುಮಾರ್(50)ಗೆ ಅಲಿಗಡ ನ್ಯಾಯಾಲಯವು ಶನಿವಾರ ಮರಣ ದಂಡನೆಯನ್ನು ವಿಧಿಸಿದೆ.
2014,ಜು.12ರಂದು ತನ್ನ ಪತ್ನಿ ಸೀಮಾದೇವಿ(38) ಜೊತೆ ಜಗಳವಾಡಿದ್ದ ಕುಮಾರ್ ಕೋಪದ ಭರದಲ್ಲಿ ತನ್ನ ಕಪಾಟಿನಿಂದ ರೈಫಲ್ ಮತ್ತು ಪಿಸ್ತೂಲು ಹೊರತೆಗೆದು ಆಕೆಯ ಎದೆಗೆ ಗುಂಡು ಹಾರಿಸಿದ್ದ. ಗುಂಡಿನ ಶಬ್ದ ಕೇಳಿ ಧಾವಿಸಿ ಬಂದಿದ್ದ ನೆರೆಯ ನಿವಾಸಿ ಶಶಿಬಾಲಾ(40)ರ ತಲೆಗೆ ಗುಂಡಿಕ್ಕಿದ್ದ. ಬಳಿಕ ತನ್ನ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದ. ಗುಂಡು ಹಾರಾಟದಿಂದ ಕಂಗಾಲಾಗಿದ್ದ ಮಗ ಮಾನವೇಂದ್ರ ಸಿಂಗ್(6) ತಂದೆಯ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ತನ್ನನ್ನು ಕೊಲ್ಲದಂತೆ ಬೇಡಿಕೊಂಡಿದ್ದ. ಆದರ ಕುಮಾರ್ ಆತನ ತಲೆಗೂ ಗುಂಡು ಹಾರಿಸಿದ್ದ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು,ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮಗಳು ಉಸಿಮಿತಾ ಸಿಂಗ್ ಮುಖಕ್ಕೆ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದ.
ನೆರೆಕರೆಯವರು ಕುಮಾರ್‌ನನ್ನು ಹಿಡಿದು ಬಳಿಕ ಪೋಲಿಸರಿಗೆ ಒಪ್ಪಿಸಿದ್ದರು. ಸೀಮಾದೇವಿಯ ಸೋದರ ದಿಲೀಪ್ ಕುಮಾರ್ ಈ ಬಗ್ಗೆ ಪೋಲಿಸ್ ದೂರನ್ನು ದಾಖಲಿಸಿದ್ದರು.
ಉಸಿಮಿತಾ ತಂದೆಯ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದು, ನ್ಯಾಯಾಲಯವು ಅದನ್ನು ಪ್ರಮುಖವಾಗಿ ಪರಿಗಣಿಸಿದೆ.