"ವ್ಯಾಪಾರ ಒಪ್ಪಂದಕ್ಕೆ ನಾವು ಒಪ್ಪಿದ್ದೇವೆ": ಪ್ರಧಾನಿ ಮೋದಿ ಜೊತೆ ಕರೆಯ ಬಳಿಕ ಟ್ರಂಪ್ ಘೋಷಣೆ
ಭಾರತಕ್ಕೆ ಸುಂಕ ಶೇ.18ಕ್ಕೆ ಇಳಿಕೆ
ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ | Photo Credit : ANI
ಹೊಸದಿಲ್ಲಿ: ನೂತನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ತಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದೇವೆ ಎಂದು ಸೋಮವಾರ ಪ್ರಕಟಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,ಈ ಒಪ್ಪಂದವು ಉಭಯ ದೇಶಗಳ ಪರಸ್ಪರ ಸುಂಕಗಳನ್ನು ತಗ್ಗಿಸಲಿದೆ ಎಂದು ಹೇಳಿದ್ದಾರೆ.
ಮೋದಿ ಜೊತೆ ದೂರವಾಣಿ ಸಂಭಾಷಣೆಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಸುದೀರ್ಘವಾಗಿ ವಿವರಿಸಿರುವ ಟ್ರಂಪ್, ಅಮೆರಿಕವು ಭಾರತದ ಸರಕುಗಳ ಮೇಲಿನ ಪ್ರತಿಸುಂಕವನ್ನು ಶೇ.25ರಿಂದ ಶೇ.18ಕ್ಕೆ ಇಳಿಸಲಿದೆ ಮತ್ತು ಇದು ತಕ್ಷಣದಿಂದಲೇ ಜಾರಿಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿಯಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ತನ್ನ ಸುಂಕವನ್ನು ಶೂನ್ಯಕ್ಕೆ ಇಳಿಸುವ ನಿರೀಕ್ಷೆಯಿದೆ ಮತ್ತು ಇತರ ಅಡೆತಡೆಗಳನ್ನು ನಿವಾರಿಸಲಿದೆ ಎಂದು ಟ್ರಂಪ್ ಹೆಳಿದ್ದಾರೆ.
ಮೋದಿ ತನ್ನ ‘ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು’ ಎಂದು ಬಣ್ಣಿಸಿರುವ ಟ್ರಂಪ್,ಉಭಯ ನಾಯಕರು ವ್ಯಾಪಾರ,ಇಂಧನ ಸಹಕಾರ ಮತ್ತು ಉಕ್ರೇನ್ ಯುದ್ಧದ ಕುರಿತು ಚರ್ಚಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.