ಅಸ್ಸಾಂ: ಪೊಲೀಸರ ವಶದಿಂದ ತಪ್ಪಿಸಿಕೊಂಡು ಕೆರೆಗೆ ಹಾರಿದ ಅತ್ಯಾಚಾರ ಪ್ರಕರಣದ ಆರೋಪಿ ಸಾವು
Photo: ANI
ಗುವಾಹಟಿ: ಅಸ್ಸಾಂನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಮುಖ್ಯ ಆರೋಪಿಯು ಶನಿವಾರ ಪೊಲೀಸರ ವಶದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೆರೆಗೆ ಹಾರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಆಗಸ್ಟ್ 23ರಂದು ಪೊಲೀಸರಿಂದ ಬಂಧನಕ್ಕೀಡಾಗಿದ್ದ ತಫಝುಲ್ ಇಸ್ಲಾಂನನ್ನು 14 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಸ್ಥಳಕ್ಕೆ ಪೊಲೀಸರ ಬೆಂಗಾವಲಿನೊಂದಿಗೆ ಕರೆ ತರುವಾಗ ಸುಮಾರು 4 ಗಂಟೆಯ ವೇಳೆಗೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಕೂಡಲೇ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಎರಡು ಗಂಟೆಗಳ ನಂತರ ಆತನ ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನೀಲ್ ದೇಕ, “ಕಳೆದ ರಾತ್ರಿ ಪೊಲೀಸರು ಆತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡ ಪ್ರಮುಖ ಆರೋಪಿಯು, ಘಟನಾ ಸ್ಥಳದ ಸಮೀಪದಲ್ಲೇ ಇದ್ದ ಕೆರೆಗೆ ಜಿಗಿದ” ಎಂದು ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಮೂವರು ಆರೋಪಿಗಳ ಪೈಕಿ ಇಸ್ಲಾಂ ಕೂಡಾ ಓರ್ವನಾಗಿದ್ದ. ಸಂತ್ರಸ್ತ ಬಾಲಕಿಯು ಗುರುವಾರ ಸಂಜೆ ಮನೆ ಪಾಠವನ್ನು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನಾಗಾಂವ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಆಕೆಯನ್ನು ಮೋಟರ್ ಬೈಕ್ ನಲ್ಲಿ ಹಿಂಬಾಲಿಸಿದ್ದ ಮೂವರು, ಆಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದರು. ನಂತರ, ಗಾಯಗೊಂಡು ಪ್ರಜ್ಞಾಹೀನಳಾಗಿದ್ದ ಆ ಬಾಲಕಿಯನ್ನು ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದರು.
ಸಂತ್ರಸ್ತ ಬಾಲಕಿಯನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಈ ಕುರಿತು ಮಾಹಿತಿ ರವಾನಿಸಿದ್ದರು. ಕೂಡಲೇ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು, ಇನ್ನಿಬ್ಬರು ಶಂಕಿತ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.