×
Ad

ಶ್ರೀನಗರ:‌ ನಾಲ್ವರಿಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ

Update: 2025-05-05 20:42 IST

ಸಾಂದರ್ಭಿಕ ಚಿತ್ರ | PC : freepik.com

ಶ್ರೀನಗರ(ಜಮ್ಮುಕಾಶ್ಮೀರ): ನಾಲ್ವರು ದುಷ್ಕರ್ಮಿಗಳು 45ರ ಹರೆಯದ ಅಲೆಮಾರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಶ್ರೀನಗರದ ಹೊರವಲಯದ ನಿಶಾತ್ ಪ್ರದೇಶದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಳು. ಘಟನೆಯು ಕಣಿವೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೋಲಿಸ್ ವಕ್ತಾರರು ತಿಳಿಸಿದರು.

ಐವರು ಮಕ್ಕಳ ತಾಯಿಯಾಗಿದ್ದ ಮಹಿಳೆ ಅಲೆಮಾರಿ ಬಕರವಾಲ್ ಸಮುದಾಯಕ್ಕೆ ಸೇರಿದ್ದು, ಆಕೆ ಮತ್ತು ಸಮುದಾಯದ ಸದಸ್ಯರು ವಾರದ ಹಿಂದೆ ತಮ್ಮ ಜಾನುವಾರುಗಳೊಂದಿಗೆ ರಿಯಾಸಿ ಜಿಲ್ಲೆಯಿಂದ ವಲಸೆ ಬಂದಿದ್ದರು.

‘ನಾವು ಪ್ರತಿ ಬೇಸಿಗೆಯಲ್ಲಿ ಇಲ್ಲಿಗೆ ವಲಸೆ ಬರುತ್ತೇವೆ ಮತ್ತು ಚಳಿಗಾಲದಲ್ಲಿ ರಿಯಾಸಿಗೆ ಮರಳುತ್ತೇವೆ’ ಎಂದು ಮೃತ ಮಹಿಳೆಯ ಪುತ್ರ ಸುದ್ದಿಗಾರರಿಗೆ ತಿಳಿಸಿದ.

‘ಮಹಿಳೆ ಹತ್ತಿರದ ಪ್ರದೇಶದಲ್ಲಿ ದನಗಳನ್ನು ಮೇಯಿಸಲು ಸಂಜೆ ಐದು ಗಂಟೆಯ ಸುಮಾರಿಗೆ ತನ್ನ ಟೆಂಟ್‌ನಿಂದ ಹೊರಬಂದಿದ್ದರು. ರಾತ್ರಿಯಾದರೂ ಅವರು ಜಾನುವಾರುಗಳೊಂದಿಗೆ ಮರಳದಿದ್ದಾಗ ನಾವು ಹುಡುಕಾಟ ಆರಂಭಿಸಿದ್ದೆವು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯ ಬಳಿ ನಾಲ್ವರು ಪುರುಷರಿದ್ದು, ಧರಿಸಿದ್ದ ಬಟ್ಟೆಗೆ ರಕ್ತ ಮೆತ್ತಿಕೊಂಡಿದ್ದ ಓರ್ವನನ್ನು ಹಿಡಿದು ಪೋಲಿಸರಿಗೆ ಹಸ್ತಾಂತರಿಸಿದ್ದೇವೆ. ಇತರರು ಅಲ್ಲಿಂದ ಪರಾರಿಯಾಗಿದ್ದರು’ ಎಂದು ಸಮುದಾಯದ ಸದಸ್ಯರು ತಿಳಿಸಿದರು.

ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಅಲ್ಲಿ ವೈದ್ಯರು ಲಭ್ಯರಿರಲಿಲ್ಲ. ಹೀಗಾಗಿ ಶ್ರೀನಗರದ ಆಸ್ಪತ್ರೆಗೆ ಒಯ್ದಿದ್ದೆವು, ಆದರೆ ಆ ವೇಳೆಗಾಗಲೇ ಆಕೆ ಕೊನೆಯುಸಿರೆಳೆದಿದ್ದಳು ಎಂದರು.

ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳಿಗೆ ಕಠಿಣ ಶಿಕ್ಷೆಗಾಗಿ ಸಮುದಾಯದ ಸದಸ್ಯರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News