ಅಮೆರಿಕದಲ್ಲಿ ಬಂಧಿತ ಗ್ಯಾಂಗ್‌ಸ್ಟರ್ ಪಾಸ್ಸಿಯಾ ಶೀಘ್ರದಲ್ಲೇ ಭಾರತಕ್ಕೆ ಗಡೀಪಾರು
PC: x.com/firstpost
ಹೊಸದಿಲ್ಲಿ: ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವ ಹಲವು ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದ ದೇಶಭ್ರಷ್ಟ ಗ್ಯಾಂಗ್ಸ್ಟರ್ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸ್ಸಿಯಾನನ್ನು ಶೀಘ್ರವೇ ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ. ಪಾಸ್ಸಿಯಾನನ್ನು ಏಪ್ರಿಲ್ 17ರಂದು ಕ್ಯಾಲಿಫೋರ್ನಿಯಾದ ಸೆಕ್ರಮೆಂಟೊದಲ್ಲಿ ಅಮೆರಿಕದ ಎಫ್ ಬಿಐ ಮತ್ತು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ ಇಲಾಖೆ ಬಂಧಿಸಿ ಅಮೆರಿಕದ ಬಂಧನ ಕೇಂದ್ರದಲ್ಲಿ ಇರಿಸಿದೆ.
ಪಾಸ್ಸಿಯೊ ಬಂಧನವನ್ನು ಎಫ್ ಬಿಐ ಮುಖ್ಯಸ್ಥರು ಶ್ಲಾಘಿಸಿ, " ಹರ್ಪ್ರೀತ್ ಸಿಂಗ್ ವಿದೇಶಿ ಭಯೋತ್ಪಾದಕರ ಗ್ಯಾಂಗ್ನ ಭಾಗವಾಗಿದ್ದು, ಅಕ್ರಮವಾಗಿ ಅಮೆರಿಕದಲ್ಲಿ ವಾಸವಿದ್ದ ಆತನನ್ನು ಸೆರೆಹಿಡಿಯಲಾಗಿದೆ. ಭಾರತ ಹಾಗೂ ಅಮೆರಿಕದ ಪೊಲೀಸ್ ಠಾಣೆಗಳ ಮೇಲೆ ಹಲವು ದಾಳಿಗಳನ್ನು ನಡೆಸಲು ಯೋಜನೆ ರೂಪಿಸಿದ್ದ. ಸ್ಯಾಕ್ರಮೆಂಟೊ ಎಫ್ಬಿಐ ತಂಡ ಸ್ಥಳೀಯ ಹಾಗೂ ಭಾರತೀಯ ಅಧಿಕಾರಿಗಳ ಜತೆ ಸಮನ್ವಯದಲ್ಲಿ ತನಿಖೆ ನಡೆಸುತ್ತಿದೆ" ಎಂದು ಮುಖ್ಯಸ್ಥ ಕಾಶ್ ಪಟೇಲ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದರು.
ಪಂಜಾಬ್ ಪೊಲೀಸರು ಆತನ ಗಡೀಪಾರಿಗೆ ಮನವಿ ಮಾಡಿದ್ದು, ಗಡೀಪಾರು ಪ್ರಕ್ರಿಯೆ ನಡೆದಿದೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ಅಧಿಕೃತ ಮೂಲಗಳು ಹೇಳಿವೆ.
ಪಂಜಾಬ್ ನಲ್ಲಿ ಕಾನೂನು ಜಾರಿ ಸಂಸ್ಥೆಗಳನ್ನು, ಪವಿತ್ರ ತಾಣಗಳನ್ನು ಹಾಗೂ ಪ್ರಖ್ಯಾತರ ನಿವಾಸಗಳನ್ನು ಗುರಿ ಮಾಡಿ ಹಲವು ಗ್ರೆನೇಡ್ ದಾಳಿ ನಡೆಸಿದ್ದ ಈತನ ಬಗ್ಗೆ ಮಾಹಿತಿಗಾಗಿ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಐಎಸ್ಐ ಹಾಗೂ ನಿಷೇಧಿತ ಖಲಿಸ್ತಾನ ಪರ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಸೂಚನೆ ಅನುಸಾರ ಈತ ಕಾರ್ಯ ನಿರ್ವಹಿಸುತ್ತಿದ್ದ. ಪಾಕಿಸ್ತಾನ ಮೂಲದ ಉಗ್ರ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡು ಸಂಧು ಸಹಯೋಗದಲ್ಲಿ ಪಾಸ್ಸಿಯಾ ಪಂಜಾಬ್ ನ ಹಲವೆಡೆಗಳಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದ ಹಾಗೂ ಸುಲಿಗೆ, ಶೂಟಿಂಗ್ ಮತ್ತು ದೊಂಬಿ ಸೃಷ್ಟಿಸುವ ಸಂಚು ಹೂಡಿದ್ದ ಎನ್ನಲಾಗಿದೆ.