NDPS ಕಾಯ್ದೆಯಡಿ ಗಾಂಜಾ ಬೀಜಗಳು, ಎಲೆಗಳನ್ನು ನಿಷೇಧಿಸಲಾಗಿಲ್ಲ: ಆಂಧ್ರಪ್ರದೇಶ ಹೈಕೋರ್ಟ್
Photo | theweek
ಹೊಸದಿಲ್ಲಿ : ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್- 1985(NDPS ಆಕ್ಟ್) ಅಡಿಯಲ್ಲಿ 'ಗಾಂಜಾ' ಪದದ ವ್ಯಾಖ್ಯಾನವು, ಗಾಂಜಾ ಸಸ್ಯದ ́ಹೂಬಿಡುವ ಅಥವಾ ಫಲ ನೀಡುವ ಮೇಲ್ಭಾಗಕ್ಕೆ ಸೀಮಿತವಾಗಿದೆ. ಬೀಜಗಳು ಮತ್ತು ಎಲೆಗಳನ್ನು ಅದರ ವ್ಯಾಪ್ತಿಯಿಂದ ಹೊರಗಿಡುತ್ತದೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ಹೇಳಿದೆ.
ಮಾರಾಟ ಮಾಡುವ ಉದ್ದೇಶದಿಂದ ಒಡಿಶಾದಿಂದ ಆಂಧ್ರಪ್ರದೇಶಕ್ಕೆ ಕಳ್ಳಸಾಗಣೆ ಮಾಡಲಾದ ನಿಷೇಧಿತ ವಸ್ತುಗಳನ್ನು ಖರೀದಿಸಿದ್ದ ದಂಪತಿಗಳ ಅರ್ಜಿಯನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ಸ್ಪಷ್ಟೀಕರಣವನ್ನು ನೀಡಿದೆ.
ದಂಪತಿಗಳ ವಿರುದ್ಧ NDPS ಕಾಯ್ದೆಯ ಸೆಕ್ಷನ್ 20(b) (ii)(C), 8(c) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವೈದ್ಯಕೀಯ ಅಥವಾ ವೈಜ್ಞಾನಿಕ ಉದ್ದೇಶಗಳನ್ನು ಹೊರತುಪಡಿಸಿ, ಯಾವುದೇ ಮಾದಕ ದ್ರವ್ಯ ಅಥವಾ ಸೈಕೋಟ್ರೋಪಿಕ್ ವಸ್ತುವಿನ ಉತ್ಪಾದನೆ, ತಯಾರಿಕೆ, ಸ್ವಾಧೀನ, ಮಾರಾಟ ಅಥವಾ ಸಾಗಣೆಯನ್ನು ಸೆಕ್ಷನ್ 8(c) ನಿಷೇಧಿಸುತ್ತದೆ.
ಅರ್ಜಿದಾರರಿಂದ ಒಟ್ಟು 32 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಅರ್ಜಿದಾರರು ಜಾಮೀನು ಕೋರುತ್ತಾ, ವಶಪಡಿಸಿಕೊಂಡ ವಸ್ತುಗಳನ್ನು 'ಗಾಂಜಾ' ಎಂದು ಕರೆಯಲಾಗುವುದಿಲ್ಲ. ಏಕೆಂದರೆ ಎಲೆಗಳು, ಹೂವುಗಳು, ಬೀಜಗಳು ಮತ್ತು ಕಾಂಡಗಳನ್ನು ವ್ಯಾಖ್ಯಾನದಿಂದ ಹೊರಗಿಡಲಾಗಿದೆ ಎಂದು ವಾದಿಸಿದ್ದರು.
ಅರ್ಜಿದಾರರ ವಾದವನ್ನು ಸ್ವೀಕರಿಸಿದ ಹೈಕೋರ್ಟ್, ಪೊಲೀಸರು ಕಳ್ಳಸಾಗಣೆ ಮಾಡಿದ ವಸ್ತುಗಳನ್ನು ತೂಕ ಮಾಡುವಾಗ ಹೂವಿನ ಮೇಲ್ಭಾಗವನ್ನು ಇತರ ವಸ್ತುಗಳಿಂದ ಬೇರ್ಪಡಿಸಿಲ್ಲ ಎಂದು ಗಮನಿಸಿದೆ ಮತ್ತು ಜಾಮೀನು ನೀಡಿದೆ.