ಪ್ರಧಾನಿ ನೇತೃತ್ವದ ಸಮಿತಿ ಚುನಾವಣಾ ಆಯುಕ್ತರನ್ನು ನೇಮಿಸಿತು: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿಕೆ
ಅಧೀರ್ ರಂಜನ್ ಚೌಧರಿ (PTI)
ಹೊಸದಿಲ್ಲಿ : ಮಾಜಿ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖ್‌ಬೀರ್ ಸಿಂಗ್ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದು, ತಮಗೆ ಮುಂಗಡವಾಗಿ ಕಿರುಪಟ್ಟಿಯಲ್ಲಿರುವ ಹೆಸರುಗಳ ಪಟ್ಟಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಸಮಿತಿಯ ಭಾಗವಾಗಿದ್ದಾರೆ. ಚುನಾವಣಾ ಆಯೋಗಗಳ ಆಯ್ಕೆಗಾಗಿ ರಚಿಸಿರುವ ಸಮಿತಿಯು ಗೃಹ ಸಚಿವ ಅಮಿತ್ ಶಾ ಅವರನ್ನು ಒಳಗೊಂಡಿದೆ. ಸಮಿತಿ ಸಭೆಗೆ ಒಂದು ದಿನ ಮುಂಚಿತವಾಗಿ ಅಧೀರ್ ರಂಜನ್ ಚೌಧರಿ ಅವರು, ಬುಧವಾರ ಶಾರ್ಟ್‌ಲಿಸ್ಟ್ ಮಾಡಿದ ವ್ಯಕ್ತಿಗಳ ವಿವರಗಳನ್ನು ಕೇಳಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಭೆಯ ನಂತರ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಅವರು ಆಯ್ಕೆ ಕಾರ್ಯವಿಧಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿ, ಭಿನ್ನಾಭಿಪ್ರಾಯದ ಟಿಪ್ಪಣಿ ನೀಡಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಚೌಧರಿ, ಸಮಿತಿಯಲ್ಲಿ ಸರಕಾರದ ಪ್ರತಿನಿಧಿಗಳೇ ಬಹುಮತದಲ್ಲಿರುವುದರಿಂದ ಸಭೆಯನ್ನು "ಔಪಚಾರಿಕ" ವಾಗಿ ನಡೆಸಲಾಯಿತು. "ಸರಕಾರ ಬಯಸಿದ್ದು ನಡೆಯುತ್ತದೆ. ಭಾರತದ ಮುಖ್ಯ ನ್ಯಾಯಾಧೀಶರು ಈ ಸಮಿತಿಯಲ್ಲಿ ಇರಬೇಕಿತ್ತು" ಎಂದು ಹೇಳಿದರು.
“ನನಗೆ 212 ಹೆಸರುಗಳನ್ನು ನೀಡಲಾಗಿದೆ, ಯಾರಾದರೂ ಒಂದು ದಿನದಲ್ಲಿ ಇಷ್ಟು ಅಭ್ಯರ್ಥಿಗಳನ್ನು ಹೇಗೆ ಪರೀಕ್ಷಿಸುತ್ತಾರೆ? ಸಭೆಗೆ ಹತ್ತು ನಿಮಿಷಗಳ ಮೊದಲು, ಅಂತಿಮ ಮಾಡಿದ ಆರು ಹೆಸರುಗಳ ಪಟ್ಟಿಯನ್ನು ನನಗೆ ನೀಡಲಾಯಿತು. ಅದರಿಂದಲೇ ಇಬ್ಬರ ಹೆಸರನ್ನು ಆಯ್ಕೆ ಮಾಡಲಾಗುತ್ತದೆ” ಎಂದು ಅಧೀರ್ ರಂಜನ್ ಹೇಳಿದರು. ಈ ಹಿಂದೆ ಚುನಾವಣಾ ಆಯುಕ್ತರ ನೇಮಕ ಮಾಡುವ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯವರಿದ್ದರು. ಆದರೆ ಮೋದಿ ಸರಕಾರವು 2023 ರಲ್ಲಿ ಕಾನೂನಿಗೆ ತಿದ್ದುಪಡಿ ತಂದು, ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಕೇಂದ್ರ ಸಂಪುಟ ಸಚಿವರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿತು.
ಲೋಕಸಭೆ ಚುನಾವಣೆಗೆ ವಾರಗಳ ಮೊದಲು ಮಾರ್ಚ್ 6 ರಂದು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರ ಹಠಾತ್ ರಾಜೀನಾಮೆ ಮತ್ತು ಇನ್ನೋರ್ವ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ, ಚುನಾವಣಾ ಆಯೋಗದಲ್ಲಿ ಎರಡು ಹುದ್ದೆಗಳು ಖಾಲಿಯಾಗಿತ್ತು.
ಕಾಂಗ್ರೆಸ್ ಸಂಸದರಿಗೆ ಸರ್ಕಾರ ಐದು ಪಟ್ಟಿಗಳನ್ನು ಕಳುಹಿಸಿದ್ದು, 210 ಕ್ಕೂ ಹೆಚ್ಚು ಹೆಸರುಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನ ಪ್ರಕಾರ, ಸಭೆಗಿಂತ ಕೆಲವೇ ನಿಮಿಷಗಳ ಮೊದಲು ಬಹಿರಂಗಗೊಂಡ ಆರು ಕಿರು-ಪಟ್ಟಿ ಹೆಸರುಗಳು, ಉತ್ಪಲ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ತ್ರಿಪಾಠಿ, ಜ್ಞಾನೇಶ್ ಕುಮಾರ್, ಇಂದೇವರ್ ಪಾಂಡೆ, ಸುಖ್ ಬೀರ್ ಸಿಂಗ್ ಸಂಧು ಮತ್ತು ಸುಧೀರ್ ಕುಮಾರ್ ಗಂಗಾಧರ್ ರಹಾಟೆ. ಇವರೆಲ್ಲರೂ ನಿವೃತ್ತ ಅಧಿಕಾರಿಗಳು.
ಆಯ್ಕೆಯಾದ ಸಂಧು ಮತ್ತು ಕುಮಾರ್ ಇಬ್ಬರೂ ಕ್ರಮವಾಗಿ ಪಂಜಾಬ್ ಮತ್ತು ಕೇರಳದ 1998 ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಗಳು.
2021 ರಲ್ಲಿ ಪುಷ್ಕರ್ ಸಿಂಗ್ ಧಾಮಿ ಮುಖ್ಯಮಂತ್ರಿಯಾದಾಗ ಸಂಧು ಅವರನ್ನು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಜ್ಞಾನೇಶ್ ಕುಮಾರ್ ಅವರು ಗೃಹ ಸಚಿವಾಲಯದಲ್ಲಿದ್ದ ಅವಧಿಯಲ್ಲಿ 370 ನೇ ವಿಧಿಯ ರದ್ದತಿಯನ್ನು ಮೇಲ್ವಿಚಾರಣೆ ಮಾಡಿದ್ದರು. ಅವರು ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.