ನುಚ್ಚಕ್ಕಿ ಮೇಲಿನ ರಫ್ತು ನಿಷೇಧ ತೆರವು; ಜಾಗತಿಕ ಅಕ್ಕಿ ಬೆಲೆ ಇಳಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ | PC : freepik.com
ನುಚ್ಚಕ್ಕಿ ಮೇಲಿನ ರಫ್ತು ನಿಷೇಧ ತೆರವು; ಜಾಗತಿಕ ಅಕ್ಕಿ ಬೆಲೆ ಇಳಿಕೆ ಸಾಧ್ಯತೆ
ಹೊಸದಿಲ್ಲಿ: ನುಚ್ಚಕ್ಕಿ ರಫ್ತಿನ ಮೇಲಿನ ನಿಷೇಧವನ್ನು ಕೇಂದ್ರ ಸರಕಾರ ತೆರವುಗೊಳಿಸಿದೆ. ಈ ನಿರ್ಧಾರದಿಂದ ಜಾಗತಿಕ ಅಕ್ಕಿ ಬೆಲೆಯಲ್ಲಿ ತೀವ್ರ ಇಳಿಕೆಯಾಗುವ ಸಾಧ್ಯತೆ ಇದೆ.
ಜಗತ್ತಿನ ಅತಿದೊಡ್ಡ ಅಕ್ಕಿ ರಫ್ತುದಾರ ಭಾರತ ಅಂತರ ರಾಷ್ಟ್ರೀಯ ಮಾರುಕಟ್ಟೆಗೆ 10 ಲಕ್ಷ ಮೆಟ್ರಿಕ್ ಟನ್ ನುಚ್ಚಕ್ಕಿಯನ್ನು ಪೂರೈಸಬಹುದಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ವಿದೇಶಿ ವ್ಯಾಪಾರದ ಮಹಾ ನಿರ್ದೇಶಕರು (ಡಿಜಿಎಫ್‌ಟಿ) ಮಾರ್ಚ್ 7ರ ಅಧಿಸೂಚನೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ನುಚ್ಚಕ್ಕಿಯ ರಫ್ತು ನೀತಿಯನ್ನು ‘ನಿಷೇಧ’ದಿಂದ ‘ಮುಕ್ತ’ ಮಾರಾಟಕ್ಕೆ ತಿದ್ದುಪಡಿ ಮಾಡಿದ್ದಾರೆ. 2022 ಸೆಪ್ಟಂಬರ್‌ನಿಂದ ಈ ನಿರ್ಬಂಧ ಜಾರಿಯಲ್ಲಿತ್ತು.
ನುಚ್ಚಕ್ಕಿ ರಫ್ತಿಗೆ ಭಾರತ ಶೇ. 100ರಷ್ಟು ಅನುಮತಿ ನೀಡಲಿದೆ, ಇದನ್ನು ನಿರ್ಬಂಧಿತ ವರ್ಗದಿಂದ ತೆಗೆದು ಹಾಕಲಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಎಲ್ ನಿನೋ ಪ್ರಭಾವದಿಂದ ಮುಂಗಾರು ದುರ್ಬಲಗೊಳ್ಳಬಹುದು. ಇದು 2023ರಲ್ಲಿ ಅಕ್ಕಿ ಉತ್ಪಾದನೆಯ ಇಳಿಕೆಗೆ ಕಾರಣವಾಗಬಹುದು ಎಂದು ಆತಂಕಪಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ನುಚ್ಚಕ್ಕಿ ರಫ್ತಿಗೆ ನಿಷೇಧ ಹೇರಲಾಗಿತ್ತು. ಆದರೆ, 2024ರಲ್ಲಿ ಸುರಿದ ಹೆಚ್ಚುವರಿ ಮಳೆಯಿಂದಾಗಿ ಬಂಪರ್ ಬೆಳೆ ಬಂದಿತ್ತು. ಇದು ನಿರ್ಬಂಧವನ್ನು ಸಡಿಸಲಿಸಲು ಸರಕಾರವನ್ನು ಪ್ರೇರೇಪಿಸಿತು.
ರಫ್ತು ನಿಷೇಧ ದೇಶದಲ್ಲಿ ಅಕ್ಕಿ ಬೆಲೆ ಇಳಿಕೆಗೆ ಹಾಗೂ ದಾಸ್ತಾನು ಮಟ್ಟ ಏರಿಕೆಗೆ ಕಾರಣವಾಗಿತ್ತು. ಇದರ ಹೊರತಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಜಡವಾಗಿ ಉಳಿದಿತ್ತು.