ಲಂಡನ್ | ಡಬ್ಲಿನ್ ನಲ್ಲಿ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ: ನಿನ್ನ ಸ್ವದೇಶಕ್ಕೆ ಮರಳಿ ಹೋಗು ಎಂದ ದಾಳಿಕೋರರು
ಸಾಂದರ್ಭಿಕ ಚಿತ್ರ
ಲಂಡನ್: ಕಳೆದ 23 ವರ್ಷಗಳಿಂದ ಐರ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಐರ್ಲೆಂಡ್ ರಾಜಧಾನಿ ಡಬ್ಲಿನ್ ನಲ್ಲಿ ಅಪ್ರಚೋದಕ ಹಲ್ಲೆ ನಡೆದಿದೆ. ಈ ಘಟನೆಯ ಸಂಬಂಧ ಸ್ಥಳೀಯ ಗರ್ಡಾಯಿ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.
“ನಾನು ಇಪ್ಪತ್ತರ ಹರೆಯದಲ್ಲಿರುವ ಇಬ್ಬರು ಸ್ಥಳೀಯ ಯುವಕರನ್ನು ಶುಕ್ರವಾರ ರಾತ್ರಿ ಟ್ಯಾಕ್ಸಿಗೆ ಹತ್ತಿಸಿಕೊಂಡು ಡಬ್ಲಿನ್ ನ ಉಪ ನಗರವಾದ ಬಲ್ಲಿಮನ್ ನಲ್ಲಿನ ಪಾಪಿನ್ ಟ್ರೀಗೆ ಬಿಟ್ಟೆ. ಅವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ, ಟ್ಯಾಕ್ಸಿಯ ಬಾಗಿಲು ತೆರೆದು ನನ್ನ ತಲೆಯ ಮೇಲೆ ಎರಡು ಬಾರಿ ಬಾಟಲಿಯೊಂದರಿಂದ ಹಲ್ಲೆ ನಡೆಸಿದರು. ನಂತರ ಅಲ್ಲಿಂದ ಪರಾರಿಯಾಗುವಾಗ, “ನೀನು ನಿನ್ನ ಸ್ವದೇಶಕ್ಕೆ ಮರಳಿ ಹೋಗು” ಎಂದು ಅವರಿಬ್ಬರೂ ಕೂಗಿಕೊಂಡರು” ಎಂದು 40ರ ಹರೆಯದ ಲಖ್ವೀರ್ ಸಿಂಗ್ ತಿಳಿಸಿದ್ದಾರೆ.
“ಕಳೆದ 10 ವರ್ಷಗಳಲ್ಲಿ ನಾನು ಈ ರೀತಿಯ ಯಾವ ಘಟನೆಯನ್ನೂ ಕಂಡಿಲ್ಲ” ಎಂದು ಅವರು Dublin Live ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ನಾನು ನಿಜಕ್ಕೂ ಭೀತಗೊಂಡಿದ್ದು, ನಾನೀಗ ರಸ್ತೆಗಿಳಿಯುತ್ತಿಲ್ಲ. ಮತ್ತೆ ರಸ್ತೆಗಿಳಿಯುವುದು ತುಂಬಾ ಕಠಿಣವಾಗಿದೆ. ನನ್ನ ಮಕ್ಕಳು ನಿಜಕ್ಕೂ ಭಯಭೀತರಾಗಿದ್ದಾರೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿದ್ದ ಲಖ್ವೀರ್ ಸಿಂಗ್ ಅವರನ್ನು ಡಬ್ಲಿನ್ ನಗರದ ಬೀಮೌಂಟ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಡಬ್ಲಿನ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇತ್ತೀಚೆಗೆ ರಾಜಧಾನಿ ಡಬ್ಲಿನ್ ನಗರದ ಸುತ್ತಮುತ್ತ ನಡೆಯುತ್ತಿರುವ ದಾಳಿಗಳ ಕುರಿತು ಶುಕ್ರವಾರ ಭಾರತೀಯ ರಾಯಭಾರ ಕಚೇರಿ ಕಳವಳ ವ್ಯಕ್ತಪಡಿಸಿ, ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಭಾರತೀಯರಿಗೆ ಸಲಹಾಸೂಚಿ ಬಿಡುಗಡೆ ಮಾಡಿದ ಬೆನ್ನಿಗೇ ಈ ಘಟನೆ ನಡೆದಿದೆ.