×
Ad

ಗೋವಾ ಫಿಲ್ಮ್ ಫೆಸ್ಟಿವಲ್ : ಮ್ಯಾಗಝಿನ್ ನಲ್ಲಿ ಜಾತಿ ತಾರತಮ್ಯ ವಿರೋಧಿ ಕವನ ಪ್ರಕಟಿಸಲು ನಿರಾಕರಣೆ

Update: 2023-11-27 18:43 IST

ವಿಷ್ಣು ಸೂರ್ಯ ವಾಘ್  | Photo: scroll.in

ಹೊಸದಿಲ್ಲಿ: ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪುರವಣಿಯ ರವಿವಾರ ಆವೃತ್ತಿ “ದಿ ಪೀಕಾಕ್”ನಲ್ಲಿ ಜಾತಿ ತಾರತಮ್ಯ ಕುರಿತಂತೆ ಗೋವಾದ ಸಾಹಿತಿ ಹಾಗೂ ಬಿಜೆಪಿಯ ಮಾಜಿ ಶಾಸಕ ವಿಷ್ಣು ಸೂರ್ಯ ವಾಘ್ ಅವರ ಕವಿತೆಯನ್ನು ಪ್ರಕಟಿಸದೇ ಇರಲು ನಿರ್ಧರಿಸಿರುವುದು ವಿವಾದಕ್ಕೀಡಾಗಿದೆ.

“ಸೆಕ್ಯುಲರ್” ಎಂಬ ಶೀರ್ಷಿಕೆಯುಳ್ಳ ಕವನದೊಂದಿಗೆ ವಾಘ್ ಕುರಿತು ಕಲಾವಿದ ಸಿದ್ದೇಶ್ ಗೌತಮ್ ಅವರ ಎರಡು ಪುಟಗಳ ಸಚಿತ್ರ ವಿವರಣೆ ಕೂಡ ಪ್ರಕಟಗೊಳ್ಳಬೇಕಿತ್ತು. ಈ ಕವನವು ವಾಘ್ ಅವರ ಕವನ ಸಂಗ್ರಹ “ಸುಧೀರ್ಸೂಕ್ತ”ದಿಂದ ಆರಿಸಲಾಗಿತ್ತು.

“ವಾಘ್ ಅವರ ಕವನವು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪ್ರತಿದಿನ ನಡೆಯುವ ಜಾತಿ ತಾರತಮ್ಯವನ್ನು ಬಿಂಬಿಸುತ್ತಿರುವುದರಿಂದ ಅದನ್ನು ಆರಿಸಿಕೊಂಡಿದ್ದೆ. ಅಂತಹುದೇ ಘಟನೆಗಳನ್ನು ನನ್ನ ಜೀವನದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ಖ್ಯಾತ ಕಲಾವಿದನಾಗಿದ್ದಾಗಲೂ ಅನುಭವಿಸಿದ್ದೆ,” ಎಂದು ಹೇಳಿದ ಕಲಾವಿದ ಗೌತಮ್ ವಾಘ್ ಅವರ ಕವನದ ಅನುವಾದದ ಜೊತೆಗೆ ತಾವು ರಚಿಸಿದ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ದಿ ಪಿಕಾಕ್ ತಂಡವೇ ಈ ನಿರ್ದಿಷ್ಟ ಕವನವನ್ನು ಅನುವಾದಿಸುವಂತೆ ತಿಳಿಸಿತ್ತು ಎಂದು ವಾಘ್ ಅವರ ಸೋದರಳಿಯ ಕೌಸ್ತುಭ್ ನಾಯ್ಕ್ ಹೇಳಿದ್ದಾರೆ. ಆದರೆ ನಂತರ ಆ ಕವನ ಪ್ರಕಟಿಸಲಾಗದು ಎಂದು ಮಾಹಿತಿ ನೀಡಲಾಗಿತ್ತು. ಕವನ ಪ್ರಕಟಿಸಲಾಗಿಲ್ಲದೇ ಇದ್ದರೂ ವಾಘ್ ಕುರಿತ ಸಚಿತ್ರ ವಿವರಣೆಯನ್ನು ಪ್ರಕಟಿಸಲಾಗಿತ್ತು.

ಕೆಲವೊಂದು ಸೃಜನಾತ್ಮಕ ಸಂಬಂಧಿತ ಕಾರಣಗಳಿಂದಾಗಿ ಕವನವನ್ನು ಪ್ರಕಟಿಸದೇ ಇರಲು ಸಂಪಾದಕೀಯ ತಂಡ ನಿರ್ಧರಿಸಿತ್ತು. ಕವನದಲ್ಲಿನ ವಿಷಯ ಕುರಿತು ಯಾವುದೇ ಸಮಸ್ಯೆಯಿಲ್ಲ ಎಂದು ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾದ ಸಿಇಒ ಅಂಕಿತಾ ಮಿಶ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News