ದೇವತೆಗಳನ್ನು ಪೂಜಿಸಿ, ಪುತ್ರಿಯರನ್ನು ನಿರ್ಲಕ್ಷಿಸಲಾಗುತ್ತಿದೆ: ಸುಪ್ರೀಂಕೋರ್ಟ್
ಹೊಸದಿಲ್ಲಿ: ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಪುತ್ರಿಯರನ್ನು ಮನೆಯಿಂದ ಹೊರಹಾಕಿದ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಇಂಥ ಹೀನ ನಡತೆ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಮೂಲ ಭಿನ್ನತೆಯನ್ನು ನಿರ್ಮೂಲನೆಗೊಳಿಸುವಂಥದ್ದು ಎಂದು ಛೀಮಾರಿ ಹಾಕಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, "ನಿಮ್ಮ ಅಪ್ರಾಪ್ತ ವಯಸ್ಸಿನ ಪುತ್ರಿಯರ ಬಗ್ಗೆಯೂ ಕಾಳಜಿ ವಹಿಸದ ನೀವು ಎಂಥ ವ್ಯಕ್ತಿ? ಈ ಜಗತ್ತಿಗೆ ಕಾಲಿಟ್ಟ ಪುತ್ರಿಯರು ಏನು ತಪ್ಪು ಮಾಡಿದ್ದಾರೆ" ಎಂದು ಪ್ರಶ್ನಿಸಿದೆ.
"ಹಲವು ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ ಆತನಿಗೆ ಅಸಕ್ತಿ. ಇಂಥ ಕ್ರೂರ ವ್ಯಕ್ತಿ ನಮ್ಮ ನ್ಯಾಯಾಲಯಕ್ಕೆ ಪ್ರವೇಶಿಸಲು ನಾವು ಅವಕಾಶ ನೀಡುವುದಿಲ್ಲ. ಸರಸ್ವತಿ ಮತ್ತು ಲಕ್ಷ್ಮಿ ದೇವತೆಗಳನ್ನು ದಿನವಿಡೀ ಪ್ರಾರ್ಥಿಸುವ ನೀವು ಇಂಥದ್ದನ್ನು ಮಾಡುತ್ತೀರಿ" ಎಂದು ಹೇಳಿದೆ.
ಪರಿತ್ಯಕ್ತ ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿಗೆ ಜೀವನ ನಿರ್ವಹಣೆಗೆ ಹಣ ನೀಡುವ ವರೆಗೆ ಅಥವಾ ಕೃಷಿ ಭೂಮಿಯಲ್ಲಿ ಪಾಲು ಕೊಡುವವರೆಗೆ ಆ ವ್ಯಕ್ತಿಗೆ ನ್ಯಾಯಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. "ಕೃಷಿ ಭೂಮಿಯಲ್ಲಿ ಪಾಲು ನೀಡಲು ಅಥವಾ ನಿಶ್ಚಿತ ಠೇವಣಿಯನ್ನು ಇಡಲು ಇಲ್ಲವೇ ನಿರ್ವಹಣಾ ವೆಚ್ಚವನ್ನು ಭರಿಸಲು ಆ ವ್ಯಕ್ತಿಗೆ ತಿಳಿಸಿ; ಆ ಬಳಿಕ ಕೋರ್ಟ್ನಿಂದ ಅನುಕೂಲಕರ ಆದೇಶ ಪಡೆಯಲು ತಿಳಿಸಿ" ಎಂದು ಅರ್ಜಿದಾರರ ಪರ ವಕೀಲರಿಗೆ ಸ್ಪಷ್ಟ ಸೂಚನೆ ನೀಡಿತು.
ಅಪ್ರಾಪ್ತ ವಯಸ್ಸಿನ ಪುತ್ರಿಯರ ಬಗ್ಗೆ ಕಾಳಜಿ ಇಲ್ಲ ಎಂದಾದರೆ ಅಂಥ ವ್ಯಕ್ತಿಗೆ ಮತ್ತು ಪ್ರಾಣಿಗೆ ಏನು ವ್ಯತ್ಯಾಸ ಎಂದು ನ್ಯಾಯಪೀಠ ಪ್ರಶ್ನಿಸಿದೆ. ವಿಚಾರಣಾ ನ್ಯಾಯಾಲಯ ಈ ಪ್ರಕರಣದಲ್ಲಿ ಪರಿತ್ಯಕ್ತ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಪಡಿಸಿತ್ತು. ವಂಚನೆಯಿಂದ ಆಕೆಯ ಗರ್ಭಕೋಶ ತೆಗೆಸಿ ಬೇರೆ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂದೂ ಆಪಾದಿಸಲಾಗಿತ್ತು.