×
Ad

ಮತ್ತೊಮ್ಮೆ ಸಾರ್ವಕಾಲಿಕ ಏರಿಕೆ ಕಂಡ ಚಿನ್ನ, ಬೆಳ್ಳಿ ದರ

ಈ ವರ್ಷ ಚಿನ್ನದ ದರದಲ್ಲಿ ಶೇ. 44.14ರಷ್ಟು, ಬೆಳ್ಳಿಯ ದರದಲ್ಲಿ ಶೇ. 47.16ರಷ್ಟು ಏರಿಕೆ!

Update: 2025-09-12 19:51 IST

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತೊಮ್ಮೆ ಸಾರ್ವಕಾಲಿಕ ಏರಿಕೆ ಕಂಡಿದ್ದು, ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಪ್ರತಿ 10 ಗ್ರಾಂ ಚಿನ್ನದ ದರ 1,13,800 ರೂ. ಹಾಗೂ ಪ್ರತಿ ಕೆಜಿ ಬೆಳ್ಳಿಯ ದರ 1,32,000 ರೂ. ತಲುಪಿತು.

ಜಾಗತಿಕ ಮಟ್ಟದಲ್ಲಿ ಬಲಿಷ್ಠ ಬೇಡಿಕೆ ಹಾಗೂ ಅಮೆರಿಕ ಕೇಂದ್ರೀಯ ಬ್ಯಾಂಕ್ ತನ್ನ ಬಡ್ಡಿ ದರ ಕಡಿತಗೊಳಿಸಬಹುದು ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ಏರಿಕೆಯಾಗಿದೆ.

ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ಪ್ರಕಾರ, ಶೇ. 99.9 ಪರಿಶುದ್ಧತೆ ಹೊಂದಿರುವ ಚಿನ್ನದ ದರ ಪ್ರತಿ 10 ಗ್ರಾಂಗೆ 700 ರೂ.ನಷ್ಟು ಏರಿಕೆ ಕಂಡು, ಎಲ್ಲ ಬಗೆಯ ತೆರಿಗೆಗಳು ಸೇರಿ 1,13,800 ರೂ. ತಲುಪಿತು. ಈ ಹಿಂದಿನ ಮಾರುಕಟ್ಟೆಯ ವಹಿವಾಟಿನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 1,13,100 ರೂ.ನಂತೆ ಅಂತ್ಯಗೊಂಡಿತ್ತು.

ಈ ವರ್ಷದಲ್ಲಿ ಹಳದಿ ಲೋಹದ ಬೆಲೆ ಶೇ. 44.14ರಷ್ಟು ಏರಿಕೆ ದಾಖಲಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ, ಪ್ರತಿ 10 ಗ್ರಾಂಗೆ 34,850 ರೂ. ಏರಿಕೆಯಾಗಿದೆ. ಡಿಸೆಂಬರ್ 31, 2024ರ ಅಂತ್ಯಕ್ಕೆ ಚಿನ್ನದ ದರ ಪ್ರತಿ 10 ಗ್ರಾಂಗೆ 78,950 ರೂ. ಇತ್ತು.

ಸ್ಥಳೀಯ ಚಿನಿವಾರ ಪೇಟೆಯಲ್ಲಿ ಶೇ. 99.5 ಪರಿಶುದ್ಧತೆಯ ಚಿನ್ನದ ದರ ಪ್ರತಿ 10 ಗ್ರಾಂಗೆ 700 ರೂ. ಏರಿಕೆ ಕಂಡಿದ್ದು, ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಎಲ್ಲ ಬಗೆಯ ತೆರಿಗೆಗಳೂ ಸೇರಿ 1,13,300 ರೂ. ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ದರವಾಗಿದೆ.

ಇದಕ್ಕೂ ಮುನ್ನ, ಗುರುವಾರದಂದು ಪ್ರತಿ 10 ಗ್ರಾಂ ಚಿನ್ನದ ದರ 1,12,600 ರೂ. ಇತ್ತು.

ಮತ್ತೊಂದೆಡೆ ಬೆಳ್ಳಿಯ ದರ ಕೂಡಾ ಏರಿಕೆ ದಾಖಲಿಸಿದ್ದು, ಭೌತಿಕ ಖರೀದಿ ಹಾಗೂ ಹೂಡಿಕೆ ವಲಯದಲ್ಲಿ ಬೆಳ್ಳಿಗೆ ಸದೃಢ ಬೇಡಿಕೆಯಿದ್ದ ಕಾರಣಕ್ಕೆ ಪ್ರತಿ ಕೆಜಿಗೆ 1,28,000 ರೂ. ಸಮೀಪಕ್ಕೆ ತಲುಪಿತು.

ಈ ವರ್ಷ ಬೆಳ್ಳಿಯ ದರ ಗಗನಮುಖಿಯಾಗಿದ್ದು, ಶೇ. 47.16ರಷ್ಟು ಅಥವಾ 42,300 ರೂ.ನಷ್ಟು ಏರಿಕೆ ಕಂಡಿದೆ. ಡಿಸೆಂಬರ್ 31, 2024ಕ್ಕೆ ಅಂತ್ಯಗೊಂಡಂತೆ ಬೆಳ್ಳಿಯ ದರ ಪ್ರತಿ ಕೆಜಿಗೆ 89,700 ರೂ.ನಷ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News