×
Ad

ಉತ್ತರ ಪ್ರದೇಶ: ಕಳ್ಳರು ಎಂಬ ಶಂಕೆಯಲ್ಲಿ ಸಮೀಕ್ಷೆಗೆಂದು ಬಂದ ಗೂಗಲ್ ಮ್ಯಾಪ್ ತಂಡವನ್ನು ಥಳಿಸಿದ ಗ್ರಾಮಸ್ಥರು

Update: 2025-08-31 14:38 IST

Photo credit: NDTV

ಕಾನ್ಪುರ: ಸಮೀಕ್ಷೆಗೆಂದು ತೆರಳಿದ್ದ ಗೂಗಲ್ ಮ್ಯಾಪ್ ತಂಡವನ್ನು ಕಳ್ಳರು ಎಂಬ ಶಂಕೆಯಲ್ಲಿ ಗ್ರಾಮಸ್ಥರು ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಗ್ರಾಮವೊಂದರಲ್ಲಿ ನಡೆದಿದೆ.

ಟೆಕ್ ಮಹೀಂದ್ರ ಹೊರಗುತ್ತಿಗೆ ನೀಡಿದ್ದ ಗೂಗಲ್ ಮ್ಯಾಪ್ ತಂಡದ ಸದಸ್ಯರು ಬಿರ್ಹಾರ್ ಗ್ರಾಮದ ಬೀದಿಗಳ ನಕ್ಷೆಯನ್ನು ಕ್ಯಾಮೆರಾ ಹಾಗೂ ಯಂತ್ರಚಾಲಿತ ವಾಹನವೊಂದರ ಮೂಲಕ ಮಾಡುವಾಗ ಈ ಘಟನೆ ನಡೆದಿದೆ. ಗೂಗಲ್ ಮ್ಯಾಪ್ ನಲ್ಲಿ ಸಮರ್ಪಕ ನಕ್ಷೆಯನ್ನು ಖಾತರಿಗೊಳಿಸಲು ಅವರು ರಸ್ತೆಗಳ ಭಾವಚಿತ್ರ ಸೆರೆ ಹಿಡಿಯುತ್ತಿದ್ದರು ಎನ್ನಲಾಗಿದೆ. ಈ ವೇಳೆ, ಅವರು ಕ್ಯಾಮೆರಾವನ್ನು ಅಳವಡಿಸಿದ್ದ ವಾಹನದ ಬಗ್ಗೆ ಸಂಶಯಗೊಂಡಿರುವ ಗ್ರಾಮಸ್ಥರು, ಕ್ಯಾಮೆರಾವನ್ನು ಅಳವಡಿಸುವ ಮೂಲಕ ಕಳ್ಳತನ ಮಾಡಲು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಶಂಕಿಸಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಗೂಗಲ್ ಮ್ಯಾಪ್ ತಂಡವನ್ನು ಸುತ್ತುವರಿದಿರುವ ಗ್ರಾಮಸ್ಥರ ಗುಂಪೊಂದು, ಅವರ ವಾಹನಕ್ಕೆ ತಡೆ ಒಡ್ಡಿ, ಅವರನ್ನು ಪ್ರಶ್ನೆಗೊಳಪಡಿಸಿದ್ದಾರೆ. ಆದರೆ, ಇದು ಘರ್ಷಣೆಗೆ ತಿರುಗಿದ್ದು, ಗ್ರಾಮಸ್ಥರ ಗುಂಪು ಅವರನ್ನು ಥಳಿಸಲು ಪ್ರಾರಂಭಿಸಿದೆ. ಬಳಿಕ, ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ವಿಚಾರಣೆಗಾಗಿ ಗ್ರಾಮಸ್ಥರು ಹಾಗೂ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ನಾವು ಕಳ್ಳರಲ್ಲ ಹಾಗೂ ನಾವು ಗ್ರಾಮದ ನಕ್ಷೆ ತಯಾರಿಸುತ್ತಿದ್ದೇವೆ ಎಂದು ಗೂಗಲ್ ಮ್ಯಾಪ್ ತಂಡದ ಸದಸ್ಯರು ಸ್ಥಳೀಯರಿಗೆ ವಿವರಿಸಿದ್ದಾರೆ. ಇದಾದ ಬಳಿಕ ಗ್ರಾಮಸ್ಥರು ಶಾಂತರಾಗಿದ್ದಾರೆ.

ಸ್ಥಳೀಯರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಹಲವಾರು ಕಳ್ಳತನ ಪ್ರಕರಣಗಳು ಜರುಗುತ್ತಿವೆ. ಹೀಗಾಗಿ, ನಾವು ಜಾಗೃತರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಆದರೆ, ಘಟನೆಯ ಸಂಬಂಧ ಗೂಗಲ್ ಮ್ಯಾಪ್ ತಂಡದ ಸದಸ್ಯರು ಗ್ರಾಮಸ್ಥರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News