ಗೂಗಲ್ ಡೂಡಲ್ ನಲ್ಲಿ ದಕ್ಷಿಣ ಭಾರತದ ಖಾದ್ಯ ಇಡ್ಲಿಗೆ ಗೌರವ!
ಮುಂಬೈ: ಜಾಗತಿಕ ತಂತ್ರಜ್ಞಾನ ದಿಗ್ಗಜ ಗೂಗಲ್ ಶನಿವಾರ ಭಾರತೀಯರಿಗೆ ರುಚಿಕರ ಅಚ್ಚರಿ ನೀಡಿದೆ. ದಕ್ಷಿಣ ಭಾರತದ ಅತಿಪ್ರಸಿದ್ಧ ಹಾಗೂ ಜನಪ್ರಿಯ ಉಪಾಹಾರ ಖಾದ್ಯ ಇಡ್ಲಿಗೆ ಗೌರವ ಸೂಚಿಸುವ ಉದ್ದೇಶದಿಂದ ಗೂಗಲ್ ತನ್ನ ಹೋಮ್‌ಪೇಜ್‌ನಲ್ಲಿ ವಿಶೇಷ ಡೂಡಲ್ ಅನ್ನು ಪ್ರದರ್ಶಿಸಿದೆ.
ಮೃದುವಾದ, ಆವಿಯಲ್ಲಿ ಬೇಯಿಸಿದ ಈ ಖಾದ್ಯವನ್ನು ಸಾಮಾನ್ಯವಾಗಿ ವಿವಿಧ ರೀತಿಯ ಚಟ್ನಿ ಮತ್ತು ಸಾಂಬಾರ್ ಗಳೊಂದಿಗೆ ಸೇವಿಸಲಾಗುತ್ತದೆ. ಇಡ್ಲಿಯ ಸರಳತೆ, ಪೌಷ್ಠಿಕತೆ ಮತ್ತು ದಕ್ಷಿಣ ಭಾರತೀಯ ಆಹಾರ ಸಂಸ್ಕೃತಿಯ ಕೊಂಡಾಡುವ ಉದ್ದೇಶದಿಂದ ಈ ಡೂಡಲ್ ವಿನ್ಯಾಸಗೊಳಿಸಲಾಗಿದೆ.
ಗೂಗಲ್ ಡೂಡಲ್ ನ ಮೇಲೆ ಕ್ಲಿಕ್ ಮಾಡಿದಾಗ, ಬಳಕೆದಾರರಿಗೆ ಕೆಳಗಿನ ವಿವರಣೆ ಕಾಣಿಸುತ್ತದೆ.
"ಇಡ್ಲಿಯ ಸಂಭ್ರಮ: ಇಂದಿನ ಡೂಡಲ್ ಇಡ್ಲಿಯನ್ನು ಸಂಭ್ರಮಿಸುತ್ತದೆ. ಇದು ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಿದ ಹಿಟ್ಟನ್ನು ಆವಿಯಲ್ಲಿ ಬೇಯಿಸಿ ಸಿದ್ಧ ಮಾಡುವ ದಕ್ಷಿಣ ಭಾರತದ ಕೇಕ್ ಆಗಿದೆ", ಎಂದು ಇಡ್ಲಿಯ ಘಮಲನ್ನು ವಿವರಿಸಲಾಗಿದೆ.
ಡೂಡಲ್ ವಿನ್ಯಾಸದ ವೈಶಿಷ್ಟ್ಯಗಳು:
"Google" ಪದದ ಪ್ರತಿಯೊಂದು ಅಕ್ಷರವೂ ಇಡ್ಲಿ ತಯಾರಿಕೆಯ ವಿವಿಧ ಹಂತಗಳನ್ನು ವಿನ್ಯಾಸಗೊಳಿಸಿದೆ.
ಮೊದಲ ‘G’ ಅಕ್ಷರವು ಬಿಳಿ ಅಕ್ಕಿ ಧಾನ್ಯಗಳನ್ನು ಪ್ರತಿನಿಧಿಸುತ್ತದೆ. ಮೊದಲ ‘O’ ಬಟ್ಟಲಿನಲ್ಲಿರುವ ಹಿಟ್ಟಿನ ರೂಪದಲ್ಲಿದೆ. ಎರಡನೇ ‘O’ ಸಾಂಪ್ರದಾಯಿಕ ಇಡ್ಲಿಯ ಹಿಟ್ಟನ್ನು ಅಚ್ಚಿಗೆ ಸುರಿದಿರುವ ದೃಶ್ಯವನ್ನು ತೋರಿಸುತ್ತದೆ. ಮುಂದಿನ ‘G’ ಅಕ್ಷರವು ತಯಾರಾದ ಇಡ್ಲಿಯ ವಿನ್ಯಾಸದಿಂದ ರೂಪಿತವಾಗಿದೆ. ‘L’ ಅಕ್ಷರವನ್ನು ವಿವಿಧ ಚಟ್ನಿಗಳಿಂದ ವಿನ್ಯಾಸಗೊಳಿಸಲಾಗಿದೆ. ಕೊನೆಯ ‘E’ ಅಕ್ಷರವು ತುಂಡರಿಸಿದ ಇಡ್ಲಿಯ ವಿನ್ಯಾಸದಲ್ಲಿದೆ.
ಈ ಸಂಪೂರ್ಣ ವಿನ್ಯಾಸವನ್ನು ಬಾಳೆ ಎಲೆಯ ಹಿನ್ನೆಲೆಯ ಮೇಲೆ ಚಿತ್ರಿಸಿರುವುದರಿಂದ, ಅದು ದಕ್ಷಿಣ ಭಾರತದ ಆಹಾರ ಸಂಸ್ಕೃತಿಯ ನೈಜ ಸುವಾಸನೆಯನ್ನು ಮೂಡಿಸಿದೆ.
ಗೂಗಲ್‌ನ ಈ ಸೃಜನಾತ್ಮಕ ಹೆಜ್ಜೆ ಭಾರತೀಯ ಅಡುಗೆ ಪರಂಪರೆಯ ವೈಭವವನ್ನು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಅನಾವರಣಗೊಳಿಸಿದೆ.