ಟ್ರಂಪ್ ಸುಳ್ಳುಗಾರ ಎಂದು ಮೋದಿ ಹೇಳಿದರೆ ಅವರು ಸತ್ಯವನ್ನು ಬಯಲುಗೊಳಿಸುತ್ತಾರೆ: ರಾಹುಲ್ ಗಾಂಧಿ
Photo : PTI
ಹೊಸದಿಲ್ಲಿ,ಜು.30: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮದಲ್ಲಿ ತನ್ನ ಪಾತ್ರದ ಕುರಿತು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಲು ಸಾಧ್ಯವಿಲ್ಲ. ಅವರು ಹಾಗೆ ಮಾಡಿದರೆ ಟ್ರಂಪ್ ಸತ್ಯಾಂಶವನ್ನು ಬಯಲುಗೊಳಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬುಧವಾರ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಮೆರಿಕದ ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ ಎಂದು ಮೋದಿಯವರು ಸಂಸತ್ತಿನಲ್ಲಿ ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಡಲು ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಟ್ರಂಪ್ ಅವರ ಪುನರಪಿ ಹೇಳಿಕೆಗಳ ಬಳಿಕ ರಾಹುಲ್ ಮತ್ತು ಪ್ರಿಯಾಂಕಾರ ಈ ಹೇಳಿಕೆಗಳು ಹೊರಬಿದ್ದಿವೆ.
ತನ್ನ ಮಧ್ಯಸ್ಥಿಕೆಯನ್ನು ಪುನರುಚ್ಚರಿಸಿ ಮತ್ತು ಭಾರತವು ಅಮೆರಿಕದಿಂದ ಶೇ.20ರಿಂದ ಶೇ.25ರಷ್ಟು ಅಧಿಕ ಸುಂಕ ದರವನ್ನು ಎದುರಿಸಲು ಸಜ್ಜಾಗುತ್ತಿದೆ ಎಂಬ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ರಾಹುಲ್, ಅದು ಸ್ಪಷ್ಟವಾಗಿದೆ. ಟ್ರಂಪ್ ಸುಳ್ಳಾಡುತ್ತಿದ್ದಾರೆ ಎಂದು ಪ್ರಧಾನಿಯವರು ಹೇಳಿಲ್ಲ. ಅವರಿಗೆ ಅದು ಸಾಧ್ಯವೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ವಾಸ್ತವ ಎಂದು ಉತ್ತರಿಸಿದರು.
ವ್ಯಾಪಾರ ಒಪ್ಪಂದಕ್ಕಾಗಿ ಭಾರತದ ಮೇಲೆ ಒತ್ತಡ ಹೇರಲು ಟ್ರಂಪ್ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾವ ರೀತಿಯ ಒಪ್ಪಂದವಾಗಲಿದೆ ಎನ್ನುವುದನ್ನು ನೀವೇ ನೋಡಿ ಎಂದು ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಹೇಳಿದರು.