×
Ad

ಸ್ವಾತಂತ್ರ್ಯ ದಿನದಂದು ವಿವಾದ ಸೃಷ್ಟಿಸಿದ ಸರಕಾರದ ಪೋಸ್ಟರ್; ಗಾಂಧಿ, ಭಗತ್ ಸಿಂಗ್‌ ಗಿಂತ ಮೇಲೆ ಸಾವರ್ಕರ್ ಚಿತ್ರ

Update: 2025-08-15 20:33 IST

Credit: X/@PetroleumMin

ಹೊಸದಿಲ್ಲಿ,ಆ.15: ಪೆಟ್ರೋಲಿಯಂ ಮತ್ತು ನೈಸರ್ಗಿಕ ತೈಲ ಸಚಿವಾಲಯದ ಸ್ವಾತಂತ್ರ್ಯದಿನ ಪೋಸ್ಟರ್ ವಿವಾದಕ್ಕೆ ಕಾರಣವಾಗಿದೆ. ವಿವಾದಾತ್ಮಕ ಹಿಂದುತ್ವ ಸಿದ್ಧಾಂತಿ ವಿ.ಡಿ.ಸಾವರ್ಕರ್ ಚಿತ್ರವನ್ನು ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರಿಗಿಂತ ಮೇಲೆ ಪ್ರಮುಖ ಸ್ಥಾನದಲ್ಲಿ ಹೊಂದಿರುವ ಈ ಪೋಸ್ಟರ್ ರಾಷ್ಟ್ರಪಿತನ ಹತ್ಯೆಯ ಆರೋಪಿಯನ್ನು ವೈಭವೀಕರಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಸಚಿವಾಲಯವು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಪೋಸ್ಟರ್ ನಲ್ಲಿ ಮಹಾತ್ಮಾ, ಬೋಸ್, ಸಿಂಗ್, ಸಾವರ್ಕರ್, ಕೆಂಪುಕೋಟೆ ಮತ್ತು ತ್ರಿವರ್ಣ ಧ್ವಜದ ಚಿತ್ರಗಳನ್ನು ಒಳಗೊಂಡಿದ್ದು, ಅಶೋಕ ಚಕ್ರದ ಹಿನ್ನೆಲೆಯೊಂದಿಗೆ ಮುದ್ರಣಗೊಂಡಿದೆ ಮತ್ತು ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂದು ಹಾರೈಸಲಾಗಿದೆ.

‘ಚಿತ್ರವು ನಿರಂಕುಶ ಶಾಹಿಯ ಪ್ರತಿರೂಪವಾಗಿದ್ದು, ಬ್ರಿಟಿಷರಿಂದ ಕ್ಷಮೆಯನ್ನು ಯಾಚಿಸಿದ್ದ ಸಾವರ್ಕರ್ ಅವರಂತಹ ವ್ಯಕ್ತಿಯನ್ನು ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ವಿವಾದಾತೀತ ಮಹಾತ್ಮಾ ಗಾಂಧಿ ಅವರಿಗಿಂತ ಮೇಲೆ ಪ್ರಮುಖವಾಗಿ ಬಿಂಬಿಸಲಾಗಿದೆ ಹಾಗೂ ಜವಾಹರ್ ಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿರಸ್ಕಾರವನ್ನು ತೋರಿಸುತ್ತಿದೆ’ಎಂದು ಎಕ್ಸ್ ಪೋಸ್ಟ್‌ ನಲ್ಲಿ ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ‘ಪ್ರತಿ ಸ್ವಾತಂತ್ರ್ಯೋತ್ಸವ ದಿನದಂದು ಇತಿಹಾಸವನ್ನು ತಿರುಚುವುದು ಮತ್ತು ದೇಶದ್ರೋಹಿಗಳನ್ನು ಹಿರೋಗಳನ್ನಾಗಿ ಮಾಡುವುದು ಮೋದಿ ನೇತೃತ್ವದ ಬಿಜೆಪಿಯ ವಾಡಿಕೆಯಾಗಿದೆ. ಇಂದಿಗೂ ನಮ್ಮನ್ನು ಕಾಡುತ್ತಿರುವ ವಿಭಜನೆ ಮತ್ತು ದ್ವೇಷದ ಬೀಜಗಳನ್ನು ಬಿತ್ತಲು ಬ್ರಿಟಿಷರೊಂದಿಗೆ ಸಹಕರಿಸಿದ್ದ ಪೂರ್ವಜರನ್ನು ಹೊಂದಿರುವ ಇಂತಹವರಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಮಹಾತ್ಮಾ ಗಾಂಧಿಯವರಿಗಿಂತ ಸಾವರ್ಕರ್ ಅವರನ್ನು ಪ್ರಮುಖವಾಗಿ ಬಿಂಬಿಸಿರುವುದು ಕಾಕತಾಳೀಯವಲ್ಲ. ಆದರೆ ಲೆಕ್ಕಾಚಾರದ ನಡೆಯಾಗಿದೆ ಎಂದು ಹೇಳಿದ ಸಿಪಿಎಂ ರಾಜ್ಯಸಭಾ ಸದನ ನಾಯಕ ಜಾನ್ ಬ್ರಿಟ್ಟಾಸ್ ಅವರು, ಸರಕಾರದ ಕ್ರಮಗಳು ತನ್ನ ಜಾತ್ಯತೀತ ಸಂವಿಧಾನಕ್ಕೆ ದೇಶದ ಬದ್ಧತೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಪುರಾವೆಗಳ ಕೊರತೆಯಿಂದ ಖುಲಾಸೆಗೊಂಡಿದ್ದರೂ ಸಾರ್ವಕರ್ ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿದ್ದರು ಮತ್ತು ಕಪೂರ್ ಆಯೋಗವು ಸಾವರ್ಕರ್ ವಿರುದ್ಧ ದೋಷಾರೋಪಣೆಯ ಸಾಂದರ್ಭಿಕ ಸಾಕ್ಷ್ಯಗಳನ್ನು ಎತ್ತಿ ತೋರಿಸಿತ್ತು ಎನ್ನುವುದು ಗಮನಾರ್ಹವಾಗಿದೆ. ಸಂವಿಧಾನವನ್ನು ಎತ್ತಿ ಹಿಡಿಯುವವರು ನ್ಯಾಯ ಮತ್ತು ಜಾತ್ಯತೀತ ಮೌಲ್ಯಗಳ ಈ ಅಣಕವನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದರು.

ಆಡಳಿತಾರೂಢ ಬಿಜೆಪಿಯು ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ್ದು ಸಾಲದೆಂಬಂತೆ ಈಗ ಅವರ ಹಂತಕನನ್ನು ವೈಭವೀಕರಿಸುತ್ತಿದೆ ಎಂದು ಕಾಂಗ್ರೆಸ್‌ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಹೇಳಿದರೆ, ಹಿರಿಯ ಕಾಂಗ್ರೆಸ್ ಸಂಸದ ಹಾಗೂ ಲೋಕಸಭಾ ಸಚೇತಕ ಮಾಣಿಕಂ ಟಾಗೋರ್ ಅವರು, ಪ್ರಧಾನಿ ನರೇಂದ್ರ ಮೋದಿಯವರು ಎಷ್ಟೇ ಪ್ರಯತ್ನಿಸಿದರೂ ಮಹಾತ್ಮಾ,ಬೋಸ್ ಮತ್ತು ಭಗತ್ ಸಿಂಗ್ ಅವರನ್ನು ‘ಮಾಫಿವೀರ’ನಿಗಿಂತ ಕೆಳಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News