×
Ad

ಭಾರತದಲ್ಲಿ ಸತತ ಮೂರನೇ ವರ್ಷವೂ ಶಾಲಾ ದಾಖಲಾತಿ ಕುಸಿತ: ಸರಕಾರಿ ವರದಿ

Update: 2025-08-29 17:04 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,: ಭಾರತದಲ್ಲಿ ಶಾಲಾ ದಾಖಲಾತಿ ಸತತ ಮೂರನೇ ವರ್ಷವೂ ಕುಸಿದಿರುವುದನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಗುರುವಾರ ಬಿಡುಗಡೆಗೊಳಿಸಿದ ದತ್ತಾಂಶಗಳು ತೋರಿಸಿವೆ.

ಪೂರ್ವ ಪ್ರಾಥಮಿಕ ಹಂತದಿಂದ ಉನ್ನತ ಮಾಧ್ಯಮಿಕ ಹಂತದವರೆಗಿನ ಶಾಲಾ ಶಿಕ್ಷಣ ಮಾನದಂಡಗಳನ್ನು ದಾಖಲಿಸುವ ಇತ್ತೀಚಿನ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜ್ಯುಕೇಷನ್ ಪ್ಲಸ್ ಡೇಟಾ 2023-24ರಲ್ಲಿ ಶಾಲಾ ದಾಖಲಾತಿಗಳಲ್ಲಿ 11 ಲಕ್ಷ ವಿದ್ಯಾರ್ಥಿಗಳ ಕುಸಿತವನ್ನು ತೋರಿಸಿದೆ.

2024-25ರಲ್ಲಿ ಒಟ್ಟು 24.6 ಕೋಟಿ ವಿದ್ಯಾರ್ಥಿಗಳು ಶಾಲೆಗಳಿಗೆ ದಾಖಲಾಗಿದ್ದರೆ, ಈ ಸಂಖ್ಯೆ 2023-24ರಲ್ಲಿ 24.8 ಕೋಟಿ ಮತ್ತು 2022-23ರಲ್ಲಿ 25.1 ಕೋಟಿ ಆಗಿತ್ತು.

ಈ ಪ್ರವೃತ್ತಿಯು ಜನವರಿಯಲ್ಲಿ ಪ್ರಕಟಗೊಂಡಿದ್ದ ಇನ್ನೊಂದು ವರದಿಗೆ ಅನುಗುಣವಾಗಿದೆ ಎಂದು ಸಚಿವಾಲಯದ ದತ್ತಾಂಶಗಳು ತೋರಿಸಿವೆ. ಜನವರಿ,2024ರ ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿಯ ಪ್ರಕಾರ ಕೋವಿಡ್-19 ಸಂದರ್ಭದಲ್ಲಿ ಏರಿಕೆಯನ್ನು ಕಂಡಿದ್ದ ಶಾಲಾ ದಾಖಲಾತಿಗಳ ಸಂಖ್ಯೆ ಈಗ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಇಳಿದಿದೆ.

ಗುರುವಾರ ಬಿಡುಗಡೆಗೊಂಡ ದತ್ತಾಂಶಗಳ ಪ್ರಕಾರ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಕುಸಿದಿದ್ದರೆ ಖಾಸಗಿ ಶಾಲೆಗಳಲ್ಲಿ ಏರಿಕೆ ಕಂಡಿದೆ.

ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ದಾಖಲಾತಿ 2022-23ರ 13.6 ಕೋಟಿಯಿಂದ 2024-25ರಲ್ಲಿ 12.1 ಕೋಟಿಗೆ ಇಳಿದಿದೆ. ಈ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದ್ದು,8.4 ಕೋಟಿಯಿಂದ 9.5 ಕೋಟಿಗೆ ಏರಿಕೆಯಾಗಿದೆ.

2024-25ರಲ್ಲಿ ಒಟ್ಟು ದಾಖಲಾತಿಗಳಲ್ಲಿ ಖಾಸಗಿ ಶಾಲೆಗಳ ಪಾಲು ಶೇ.39ನ್ನು ತಲುಪಿದ್ದು,ಇದು 2018-19ರ ಬಳಿಕ ಗರಿಷ್ಠ ಮಟ್ಟವಾಗಿದೆ.

2023-24ರಲ್ಲಿ 10.18 ಲಕ್ಷದಷ್ಟಿದ್ದ ಸರಕಾರಿ ಶಾಲೆಗಳ ಸಂಖ್ಯೆಯೂ 2024-25ರಲ್ಲಿ 10.13ಲಕ್ಷಕ್ಕೆ ಕುಸಿದಿದೆ. ಈ ಅವಧಿಯಲ್ಲಿ ಖಾಸಗಿ ಶಾಲೆಗಳ ಸಂಖ್ಯೆ 3.31 ಲಕ್ಷದಿಂದ 3.79 ಲಕ್ಷಕ್ಕೇರಿದೆ.

3ರಿಂದ 11 ವರ್ಷ ವಯೋಮಾನದ ಮಕ್ಕಳ ದಾಖಲಾತಿಯಲ್ಲಿ ಅತಿ ಹೆಚ್ಚಿನ ಕುಸಿತ ಕಂಡು ಬಂದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 2024-25ರಲ್ಲಿ ಸುಮಾರು 25 ಲಕ್ಷದಷ್ಟು ಇಳಿಕೆಯಾಗಿದೆ. ಮುಖ್ಯವಾಗಿ 1ರಿಂದ 5ರವರೆಗಿನ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 12 ಕೋಟಿಯಿಂದ 11.8 ಕೋಟಿಗೆ ಕುಸಿದಿದೆ.

ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಹಂತಗಳಲ್ಲಿ ದಾಖಲಾತಿಗಳಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News