ನನ್ನನ್ನು ಜೈಲಿಗೆ ಹಾಕಿದರೂ ಸರಕಾರದ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ: ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ತನ್ನನ್ನು ಜೈಲಿಗೆ ಹಾಕಿದರೂ ದಿಲ್ಲಿ ಸರಕಾರದ ಶಾಲೆ ನಿರ್ಮಾಣ ಹಾಗೂ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವಂತಹ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಹೇಳಿದ್ದಾರೆ.
ಇಲ್ಲಿನ ಕಿರಾರಿಯಲ್ಲಿ ಎರಡು ಶಾಲಾ ಕಟ್ಟಡಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಕೇಜ್ರಿವಾಲ್, ‘‘ಶಾಲೆ ನಿರ್ಮಾಣ ಮಾಡಿರುವುದಕ್ಕೆ ಮನೀಷ್ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಲಾಯಿತು. ಮೊಹಲ್ಲಾ ಕ್ಲಿನಿಕ್ ಗಳನ್ನು ನಿರ್ಮಾಣ ಮಾಡಿರುವುದಕ್ಕೆ ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಹಾಕಲಾಯಿತು’’ ಎಂದರು.
ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಯಂತಹ ಕೇಂದ್ರ ತನಿಖಾ ಸಂಸ್ಥೆಗಳು ಅವರ (ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್) ವಿರುದ್ಧ ಕ್ರಮ ಕೈಗೊಂಡಿತು ಎಂದು ಕೇಜ್ರಿವಾಲ್ ಆರೋಪಿಸಿದರು.
‘‘ಆದರೆ, ನೀವು ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದರೆ, ಶಾಲಾ ಕಟ್ಟಡ ಹಾಗೂ ಮೊಹಲ್ಲಾ ಕ್ಲಿನಿಕ್ ಗಳ ನಿರ್ಮಾಣ ಹಾಗೂ ದಿಲ್ಲಿಯ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ಕೆಲಸ ನಿಲ್ಲುವುದಿಲ್ಲ. ನಾವು ಅವರ ಪಕ್ಷ ಸೇರಲು ಬಿಜೆಪಿ ಬಯಸುತ್ತಿದೆ. ಆದರೆ, ನಾವು ತಲೆಬಾಗಲಾರೆವು’’ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಫೆಬ್ರವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್, ಒಟ್ಟು ಬಜೆಟ್ ನ ಕೇವಲ ಶೇ. 4ನ್ನು ಮಾತ್ರ ಶಾಲೆಗಳು ಹಾಗೂ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ. ದಿಲ್ಲಿ ಸರಕಾರ ಶಿಕ್ಷಣ ಹಾಗೂ ಆರೋಗ್ಯಕ್ಕೆ ಶೇ. 40 ವ್ಯಯಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವೆ ಅತಿಶಿ ಪಾಲ್ಗೊಂಡಿದ್ದರು.