ಗುಜರಾತ್: 5 ವರ್ಷದ ಬಾಲಕಿಯ ಕತ್ತು ಕೊಯ್ದು ದೇವಾಲಯಕ್ಕೆ ರಕ್ತ ತರ್ಪಣೆ
PC : ANI
ಬೊಡೇಲಿ: ವ್ಯಕ್ತಿಯೋರ್ವ 5 ವರ್ಷದ ಬಾಲಕಿಯ ಕತ್ತು ಕೊಯ್ದು ದೇವಾಲಯದ ಮೆಟ್ಟಿಲುಗಳಿಗೆ ರಕ್ತ ತರ್ಪಣೆ ನೀಡಿದ ಘಟನೆ ಗುಜರಾತ್‌ನ ಚೋಟಾ ಉದಯಪುರದಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಲಾಲಾ ತಡ್ವಿಯನ್ನು ಬಂಧಿಸಲಾಗಿದೆ. ಇದು ಮಾನವ ಬಲಿಯ ಪ್ರಕರಣವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಾಲಾ ತಡ್ವಿ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯಾದ ಪನೇಜ್ ಗ್ರಾಮದಿಂದ ಬಾಲಕಿಯನ್ನು ಆಕೆಯ ತಾಯಿಯ ಎದುರಿನಿಂದಲೇ ಬೆಳಗ್ಗೆ ಅಪಹರಿಸಿದ್ದಾನೆ. ಆಕೆಯನ್ನು ಮನೆಗೆ ಕರೆದೊಯ್ದು ಕತ್ತು ಕೊಯ್ದು ಹತ್ಯೆಗೈದಿದ್ದಾನೆ ಎಂದು ಉಪ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಗೌರವ್ ಅಗರ್ವಾಲ್ ತಿಳಿಸಿದ್ದಾರೆ.
‘‘ಬಾಲಕಿಯ ಕತ್ತು ಕತ್ತರಿಸಿದಾಗ ಆಕೆಯ ತಾಯಿ ಹಾಗೂ ಕೆಲವು ಗ್ರಾಮಸ್ಥರು ಆಘಾತದಿಂದ ನೋಡುತ್ತಿದ್ದರು. ಆದರೆ, ಆತ ಕೊಡಲಿ ಝಳಪಿಸುತ್ತಿದ್ದುದರಿಂದ ಅವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಅನಂತರ ಆತ ಬಾಲಕಿಯ ಕುತ್ತಿಗೆಯಿಂದ ಚಿಮ್ಮಿದ ರಕ್ತವನ್ನು ಸಂಗ್ರಹಿಸಿದ್ದಾನೆ. ತನ್ನ ಮನೆ ಸಮೀಪದಲ್ಲಿರುವ ಸಣ್ಣ ದೇವಾಲಯವೊಂದರ ಮೆಟ್ಟಿಲಿಗೆ ತರ್ಪಣೆ ನೀಡಿದ್ದಾನೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮಾಟಗಾರನಂತೆ ಕಾಣುತ್ತಿಲ್ಲ. ಈ ಹತ್ಯೆಯ ಹಿಂದಿನ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಾಲಕಿಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಲಾಲ ತಡ್ವಿ ವಿರುದ್ಧ ಅಪಹರಣ ಹಾಗೂ ಹತ್ಯೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.