ಗುಜರಾತ್ ಸೇತುವೆ ಕುಸಿತ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಇನ್ನೂ ಇಬ್ಬರು ನಾಪತ್ತೆ
PC : PTI
ವಡೋದರ: ಗುಜರಾತ್ ನ ವಡೋದರ ಜಿಲ್ಲೆಯಲ್ಲಿರುವ ಮಹಿಸಾಗರ ನದಿ ಮೇಲಿನ ಸೇತುವೆ ಕುಸಿತದಿಂದ ಸಂಭವಿಸಿರುವ ಸಾವಿನ ಸಂಖ್ಯೆ ಶುಕ್ರವಾರ 19ಕ್ಕೆ ಏರಿದೆ. ಸೇತುವೆ ಕುಸಿದ ಮೂರು ದಿನಗಳ ಬಳಿಕವೂ ಇಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
‘‘ಈವರೆಗೆ ನಾವು 18 ಮೃತದೇಹಗಳನ್ನು ನದಿಯಿಂದ ಮೇಲೆ ತೆಗೆದಿದ್ದೇವೆ. ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರ ಪೈಕಿ ಒಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯವನ್ನು ನಾವು ಈಗಲೂ ನಡೆಸುತ್ತಿದ್ದೇವೆ’’ ಎಂದು ವಡೋದರ ಜಿಲ್ಲಾಧಿಕಾರಿ ಅನಿಲ್ ದಮೆಲಿಯ ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದರು.
‘‘ಗಂಭೀರ’’ ಸೇತುವೆಯ ಒಂದು ಭಾಗವು ಬುಧವಾರ ಬೆಳಗ್ಗೆ 7:30ಕ್ಕೆ ಕುಸಿದಿದೆ. ಆಗ ಎರಡು ಲಾರಿಗಳು, ಒಂದು ಕಾರು, ಪಿಕಪ್ ವ್ಯಾನ್ ಮತ್ತು ಒಂದು ಆಟೊ ರಿಕ್ಷಾ ನದಿಗೆ ಬಿದ್ದಿವೆ.
ಆನಂದ್ ಮತ್ತು ವಡೋದರ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯನ್ನು 1985ರಲ್ಲಿ ನಿರ್ಮಿಸಲಾಗಿತ್ತು. ಆರು ಪಥಗಳ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕವನ್ನು ತಪ್ಪಿಸುವುದಕ್ಕಾಗಿ ಲಾರಿಗಳು ಈ ಸೇತುವೆಯನ್ನು ಹೆಚ್ಚಾಗಿ ಬಳಸುತ್ತಿದ್ದವು.
ಈ ಸೇತುವೆಯು ಸಂಚಾರಕ್ಕೆ ಸೂಕ್ತವಾಗಿಲ್ಲ ಎನ್ನುವುದು ಗೊತ್ತಿದ್ದರೂ ಆಡಳಿತವು ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ನೀಡಿತ್ತು. ಈ ಸೇತುವೆಯು ಈ ವರ್ಷದ ಕೊನೆಯವರೆಗೂ ಬಾಳಿಕೆ ಬರಲಿಕ್ಕಿಲ್ಲ ಎಂಬುದಾಗಿ ರಸ್ತೆಗಳು ಮತ್ತು ಸೇತುವೆ ನಿರ್ಮಾಣ ವಿಭಾಗದ ಅಧಿಕಾರಿಯೊಬ್ಬರು ಎರಡೂವರೆ ವರ್ಷಗಳ ಹಿಂದೆಯೇ ಹೇಳಿರುವ ಫೋನ್ ಸಂಭಾಷಣೆಯೊಂದು ವೈರಲ್ ಆಗಿದೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರೆ ಪಟೇಲ್ ಸೇತುವೆ ಕುಸಿತದ ಬಗ್ಗೆ ವಿವರವಾದ ತನಿಖೆಗೆ ಆದೇಶ ನೀಡಿದ್ದಾರೆ. ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ನಾಲ್ವರು ಇಂಜಿನಿಯರ್ ಗಳನ್ನು ಗುರುವಾರ ಅಮಾನತುಗೊಳಿಸಲಾಗಿದೆ.