×
Ad

ಪ್ರಧಾನಿ ಬೆಂಗಾವಲು ಪಡೆ ಸಿದ್ಧತೆ ನಡೆಸುತ್ತಿದ್ದ ರಸ್ತೆಗೆ ಸೈಕಲ್ ನಲ್ಲಿ ಬಂದ ಬಾಲಕನ ಕೂದಲು ಎಳೆದಾಡಿ ಕಪಾಳಮೋಕ್ಷ ಮಾಡಿದ ಪೊಲೀಸ್ ಅಧಿಕಾರಿ

Update: 2025-03-07 23:02 IST

ಸೂರತ್: ಪ್ರಧಾನಿ ನರೇಂದ್ರ ಮೋದಿಯ ಶುಕ್ರವಾರದ ಗುಜರಾತ್ ಭೇಟಿಯ ವೇಳೆ ಯಾವುದೇ ಭದ್ರತಾ ಲೋಪವಾಗದಂತೆ ಖಾತರಿಪಡಿಸಲು ಪ್ರಧಾನಿ ಬೆಂಗಾವಲು ಪಡೆಯ ಪೂರ್ವಾಭ್ಯಾಸ ನಡೆಯುತ್ತಿದ್ದ ರಸ್ತೆಯೊಂದಕ್ಕೆ ಆಕಸ್ಮಿಕವಾಗಿ ಪ್ರವೇಶಿಸಿದ 17 ವರ್ಷದ ಬಾಲಕನ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಗುರುವಾರ ರತನ್ ಚೌಕ್ ನಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಪ್ರಧಾನಿ ಬೆಂಗಾವಲು ಪಡೆಯ ಕಾರುಗಳು ಚಲಿಸುತ್ತಿರುವ ರಸ್ತೆಯಲ್ಲಿ ಬಾಲಕನು ಸೈಕಲ್ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ನಂತರ, ಬಾಲಕನನ್ನು ತಡೆದಿರುವ ಪೊಲೀಸ್ ಅಧಿಕಾರಿ ಬಿ.ಎಸ್.ಗಧ್ವಿ, ಆತನ ಕೂದಲನ್ನು ಎಳೆದಾಡಿ, ಆತನ ಕೆನ್ನೆಗೆ ಹೊಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಾಲಕನ ಸಂಬಂಧಿಯೊಬ್ಬರು, “ನಾವು ಆತ ವಾಯುವಿಹಾರಕ್ಕೆ ತೆರಳಿರಬಹುದು ಎಂದು ಭಾವಿಸಿದ್ದೆವು. ಆದರೆ, ಹಲವು ಗಂಟೆ ಕಳೆದರೂ ಆತ ಹಿಂದಿರುಗದಿದ್ದರಿಂದ ನಮಗೆ ಗಾಬರಿಯಾಯಿತು. ಆತ ರಾತ್ರಿ 9.30ರ ವೇಳೆಗೆ ಅಳುತ್ತಾ ಮನೆಗೆ ಮರಳಿದ. ಆದರೆ, ಯಾಕೆಂದು ನಮಗೆ ತಿಳಿಯಲಿಲ್ಲ. ನಂತರ, ಆತ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು ಎಂದು ತಿಳಿಸಿದ. ಪೊಲೀಸರು ಆತನ ಮೇಲೆ ಹಲ್ಲೆ ನಡೆಸುವ ಬದಲು, ಆತನೊಂದಿಗೆ ತಿಳಿಹೇಳಬಹುದಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೆ, “ಗಧ್ವಿಯ ನಡವಳಿಕೆ ಸಂಪೂರ್ಣವಾಗಿ ಅಸಮರ್ಥನೀಯವಾಗಿದ್ದು, ಇದಕ್ಕಾಗಿ ನಾವು ವಿಷಾದಿಸುತ್ತೇವೆ” ಎಂದು ಉಪ ಪೊಲೀಸ್ ಆಯುಕ್ತ ಅಮಿತ ವನನಿ ಕ್ಷಮೆ ಯಾಚಿಸಿದ್ದಾರೆ.

ಮೊರ್ಬಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಗಧ್ವಿಯನ್ನು ವರ್ಗಾವಣೆ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ಭದ್ರತಾ ವ್ಯವಸ್ಥೆಗಳಿಗೆ ನೆರವಾಗಲು ಸಬ್ ಇನ್ಸ್ ಪೆಕ್ಟರ್ ಗಧ್ವಿ ಸೂರತ್ ಗೆ ತೆರಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News