ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸಂಚು: ಗುಜರಾತಿನಲ್ಲಿ ಮೂವರು ಶಂಕಿತರ ಬಂಧನ
Photo Credit : thehindu.com
ಅಹ್ಮದಾಬಾದ್,ನ.9: ಶಸ್ತ್ರಾಸ್ತ್ರಗಳು ಮತ್ತು ರಾಸಾಯನಿಕಗಳೊಂದಿಗೆ ದೇಶಾದ್ಯಂತ ಭಯೋತ್ಪಾದಕ ದಾಳಿಗಳನ್ನು ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎನ್ನಲಾದ ಮೂವರು ವ್ಯಕ್ತಿಗಳನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳವು(ಎಟಿಎಸ್) ಬಂಧಿಸಿದೆ. ಬಂಧಿತರಲ್ಲಿ ಓರ್ವ ವೈದ್ಯ ಸೇರಿದ್ದಾನೆ ಎಂದು ಎಂದು ಎಟಿಎಸ್ ಡಿಐಜಿ ಸುನಿಲ ಜೋಶಿ ಅವರು ರವಿವಾರ ಇಲ್ಲಿ ತಿಳಿಸಿದರು.
ಬಂಧಿತರ ಪೈಕಿ ಓರ್ವ ತೆಲಂಗಾಣ ಮತ್ತು ಇಬ್ಬರು ಉತ್ತರ ಪ್ರದೇಶ ನಿವಾಸಿಗಳಾಗಿದ್ದು, ಶಸ್ತ್ರಾಸ್ತ್ರಗಳ ವಿನಿಮಯಕ್ಕಾಗಿ ಗುಜರಾತಿನಲ್ಲಿದ್ದರು ಮತ್ತು ‘ರಿಸಿನ್’ ಎಂಬ ಪ್ರಬಲ ವಿಷವನ್ನು ಬಳಸಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಅವರು ಹೇಳಿದರು.
ತಮ್ಮ ನಿರ್ವಾಹಕ ಪಾಕಿಸ್ತಾನದ ಗಡಿಯಾಚೆಯಿಂದ ಡ್ರೋನ್ ಮೂಲಕ ತಮಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಾನೆ ಎಂದೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದರು.
ಖಚಿತ ಸುಳಿವಿನ ಮೇರೆಗೆ ಎಟಿಎಸ್ ತಂಡವು ನ.7ರಂದು ಗಾಂಧಿನಗರದ ಅದಲಜ್ ಬಳಿ ತೆಲಂಗಾಣದ ಹೈದರಾಬಾದ್ ನಿವಾಸಿ ಡಾ.ಅಹ್ಮದ್ ಮುಹಿಯುದ್ದೀನ್ ಸಯ್ಯದ್ ನನ್ನು ಬಂಧಿಸಿ, ಆತನ ಬಳಿಯಿಂದ ಎರಡು ಗ್ಲಾಕ್ ಪಿಸ್ತೂಲುಗಳು, ಒಂದು ಬೆರೆಟ್ಟಾ ಪಿಸ್ತೂಲು, 30 ಸಜೀವ ಗುಂಡುಗಳು ಮತ್ತು ನಾಲ್ಕು ಲೀಟರ್ ಕ್ಯಾಸ್ಟರ್ ಆಯಿಲ್ ನ್ನು ವಶಪಡಿಸಿಕೊಂಡಿದೆ ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು.
ತಾನು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದೆ ಮತ್ತು ಗಾಂಧಿನಗರ ಜಿಲ್ಲೆಯ ಕಲೋಲ್ ನಲ್ಲಿಯ ಸ್ಥಳವೊಂದರಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದೇನೆ ಎಂದು ಸಯ್ಯದ್ ವಿಚಾರಣೆ ವೇಳೆ ಬಹಿರಂಗಗೊಳಿಸಿದ್ದಾನೆ ಎಂದರು.
ಸಯ್ಯದ್ ನ ನಿರ್ವಾಹಕ ಅಬು ಖತೀಜ್ ಎಂಬಾತ ಇಸ್ಲಾಮಿಕ್ ಸ್ಟೇಟ್ ಖೊರೊಸಾನ್ ಪ್ರಾವಿನ್ಸ್ (ಐಎಸ್‌ಕೆಪಿ) ಜೊತೆ ಗುರುತಿಸಿಕೊಂಡಿರುವ ಅಘ್ಘಾನಿಸ್ತಾನ ನಿವಾಸಿಯಾಗಿದ್ದು, ಪಾಕಿಸ್ತಾನದ ಹಲವಾರು ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಜೋಶಿ ತಿಳಿಸಿದರು.
ಚೀನಾದಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿರುವ ಸಯ್ಯದ್ ದೊಡ್ಡ ಭಯೋತ್ಪಾದಕ ದಾಳಿಯನ್ನು ನಡೆಸಲು ‘ರಿಸಿನ್’ ಎಂಬ ಅತ್ಯಂತ ಮಾರಣಾಂತಿಕ ವಿಷವನ್ನು ತಯಾರಿಸುತ್ತಿದ್ದ. ಈಗಾಗಲೇ ಅಗತ್ಯ ಸಂಶೋಧನೆಯನ್ನು ಆರಂಭಿಸಿದ್ದ ಆತ ಉಪಕರಣಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿದ್ದ ಹಾಗೂ ಆರಂಭಿಕ ರಾಸಾಯನಿಕ ಸಂಸ್ಕರಣೆಯನ್ನು ಪ್ರಾರಂಭಿಸಿದ್ದ ಎಂದರು.
ಉನ್ನತ ಶಿಕ್ಷಣ ಪಡೆದಿರುವ ಸಯ್ಯದ್ ಮೂಲಭೂತವಾದಿಯಾಗಿದ್ದು, ಭಾರೀ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಸಂಚಿನ ಭಾಗವಾಗಿ ಹಣವನ್ನು ಸಂಗ್ರಹಿಸಲು ಮತ್ತು ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದ್ದ ಎಂದು ಜೋಶಿ ವಿವರಿಸಿದರು.
ಸಯ್ಯದ್ ನ ಮೊಬೈಲ್ ಫೋನ್ ನಿಂದ ಪಡೆದ ಮಾಹಿತಿಯ ಮೇರೆಗೆ ಎಟಿಎಸ್ ತಂಡವು ಆತನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಉತ್ತರ ಪ್ರದೇಶ ನಿವಾಸಿಗಳಾದ ಆಝಾದ್ ಸುಲೇಮಾನ್ ಶೇಖ್ ಮತ್ತು ಮುಹಮ್ಮದ್ ಸುಹೈಲ್ ಮುಹಮ್ಮದ್ ಸಲೀಂ ಎನ್ನುವವರನ್ನು ಬನಾಸಕಾಂತಾ ಜಿಲ್ಲೆಯಿಂದ ಬಂಧಿಸಿದೆ. ಈ ಇಬ್ಬರೂ ರಾಜಸ್ಥಾನದ ಹನುಮಾನ್ ಗಡದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಸಯ್ಯದ್ ಗೆ ಪೂರೈಸಿದ್ದರು ಎಂದರು.
ಆರೋಪಿಗಳು ಲಕ್ನೋ, ದಿಲ್ಲಿ ಮತ್ತು ಅಹ್ಮದಾಬಾದ್‌ನ ಹಲವಾರು ಸೂಕ್ಷ್ಮ ಸ್ಥಳಗಳ ಸಮೀಕ್ಷೆ ನಡೆಸಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ. ಶಸ್ತ್ರಾಸ್ತ್ರಗಳ ಮೂಲದ ಕುರಿತು ಪ್ರಶ್ನಿಸಿದಾಗ, ತಮ್ಮ ನಿರ್ವಾಹಕ ಪಾಕಿಸ್ತಾನದ ಗಡಿಯಾಚೆಯಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಾನೆ ಎಂದು ಅವರು ತಿಳಿಸಿದ್ದಾರೆ ಎಂದು ಜೋಶಿ ಹೇಳಿದರು.
ಆರೋಪಿಗಳು ಐ ಎಸ್ ಕೆ ಪಿ ಜೊತೆ ಗುರುತಿಸಿಕೊಂಡಿದ್ದಾರೆಯೇ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಎಟಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿಯೂ ತನಿಖೆ ನಡೆಸುತ್ತಿದೆ ಎಂದರು.