ಗುಜರಾತ್ | ಕಾಗದದಲ್ಲೇ 1,906 ಶೌಚಾಲಯ ಕಟ್ಟಿದ ಪುರಸಭೆ; ಆರ್‌ಟಿಐ ಕಾರ್ಯಕರ್ತನಿಂದ 2 ಕೋಟಿ ರೂ. ಹಗರಣ ಬಹಿರಂಗ!
ಸಾಂದರ್ಭಿಕ ಚಿತ್ರ
ಸೂರತ್/ಭರೂಚ್: ಗುಜರಾತ್ ನ ಭರೂಚ್ ಜಿಲ್ಲೆಯಲ್ಲಿ ಶೌಚಾಲಯ ಹಗರಣವೊಂದು ಬೆಳಕಿಗೆ ಬಂದಿದೆ. ಶೌಚಾಲಯ ನಿರ್ಮಾಣದ ಹೆಸರಿನಲ್ಲಿ ಸರಕಾರದ ಸಹಾಯಧನವನ್ನು ದುರುಪಯೋಗ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಹೊರಬಿದ್ದಿವೆ. ಮಾಹಿತಿ ಹಕ್ಕು (RTI) ಮೂಲಕ ಮಾಹಿತಿ ಸಂಗ್ರಹಿಸಿದ ನಿವೃತ್ತ ಶಿಕ್ಷಕ ಪ್ರವೀಣ್ ಮೋದಿ ಈ ಹಗರಣವನ್ನು ಬಹಿರಂಗಪಡಿಸಿದ್ದಾರೆ ಎಂದು Times of India ವರದಿ ಮಾಡಿದೆ.
ಪ್ರವೀಣ್ ಮೋದಿ ಅವರು ಸಲ್ಲಿಸಿದ RTI ಅರ್ಜಿಯಲ್ಲಿ ದೊರೆತ ಮಾಹಿತಿಯ ಪ್ರಕಾರ, ಅಂಕಲೇಶ್ವರ ಪುರಸಭೆಯಲ್ಲಿ ವಿವಾಹ ಪ್ರಮಾಣಪತ್ರಕ್ಕಾಗಿ ಸಲ್ಲಿಸಲಾದ ಆಧಾರ್ ಕಾರ್ಡ್ ಮಾಹಿತಿಯನ್ನು ಶೌಚಾಲಯ ನೆರವು ಪಡೆಯಲು ಬಳಸಲಾಗಿದೆ. ನಿಜವಾಗಿಯೂ ಸಹಾಯಕ್ಕಾಗಿ ಅರ್ಜಿ ಸಲ್ಲಿಸದ ಜನರ ದಾಖಲೆಗಳನ್ನು ಬಳಸಿಕೊಂಡು, ಕನಿಷ್ಠ 2 ಕೋಟಿ ರೂಪಾಯಿ ಮೌಲ್ಯದ ಸಹಾಯಧನ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಂಕಲೇಶ್ವರ ಪುರಸಭೆಯ ದಾಖಲೆಗಳಲ್ಲಿ, ಐದು ಖಾಸಗಿ ಟ್ರಸ್ಟ್‌ಗಳಾದ ಆನಂದ್ ಕಡಿ ಗ್ರಾಮೋಧ್ಯೋಗ್ ಟ್ರಸ್ಟ್, ನವಚೇತನ ವಿಕಾಸ್ ಟ್ರಸ್ಟ್, ಕಾಮದಾರ್ ಕಲ್ಯಾಣ್ ಮಂಡಲ್, ಮಹಾತ್ಮಾ ಗಾಂಧಿ ಗ್ರಾಮನಿರ್ಮಾಣ ಟ್ರಸ್ಟ್ ಹಾಗೂ ವಸುಂಧರಾ ಸಾರ್ವಜನಿಕ ಟ್ರಸ್ಟ್ ಗಳು ಒಟ್ಟು 1,906 ಶೌಚಾಲಯಗಳನ್ನು ನಿರ್ಮಿಸಿದೆ ಎಂದು ತೋರಿಸಲಾಗಿದೆ. ಆದರೆ, ಪುರಸಭೆಯು ಸೂಚಿಸಿರುವಂತೆ ಹೇಳಿರುವ ಸ್ಥಳಗಳಲ್ಲಿ ಹಲವೆಡೆ ಶೌಚಾಲಯಗಳ ನಿರ್ಮಾಣವೇ ಆಗಿಲ್ಲ ಎಂದು ಮೋದಿ ಅವರು ಆರೋಪಿಸಿದ್ದಾರೆ.
ಐಷಾರಾಮಿ ನಿವಾಸಗಳಿಗೂ ಸಹಾಯಧನ?:
ಈ ಹಗರಣದಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, ಶೌಚಾಲಯ ಸಹಾಯಧನವನ್ನು ಬಂಗಲೆಗಳಲ್ಲಿ ವಾಸಿಸುವ ಐಷಾರಾಮಿ ಕುಟುಂಬಗಳ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. "ಅವರು ಎಂದಿಗೂ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಅವರು ನನಗೆ ಸ್ಪಷ್ಟವಾಗಿ ತಿಳಿಸಿದ್ದಾರೆ," ಎನ್ನುತ್ತಾರೆ ಮೋದಿ.
ಅಂಕಲೇಶ್ವರದ ವಾತ್ಸಲ್ಯ ಸೊಸೈಟಿಯ ಬಂಗಲೆಯಲ್ಲಿ ವಾಸಿಸುವ ನಿವಾಸಿಗಳಾದ ನೀರವ್ ಮತ್ತು ಕ್ರಿಮಾ ಹಜಾರಿವಾಲಾ 2012 ರಲ್ಲಿ ವಿವಾಹ ಪ್ರಮಾಣಪತ್ರಕ್ಕಾಗಿ ಆಧಾರ್ ನೀಡಿದ್ದರು. ಆದರೆ ಅದನ್ನೇ ದುರುಪಯೋಗ ಮಾಡಿ ಶೌಚಾಲಯ ಸಹಾಯಧನಕ್ಕೆ ಅವರ ಹೆಸರಿನಲ್ಲಿ ಅರ್ಜಿ ಹಾಕಲಾಗಿದೆ.
"ಇದು ನಮ್ಮ ಗೌರವಕ್ಕೆ ಧಕ್ಕೆ ತಂದಿದೆ. ನಾವು ಶೌಚಾಲಯಕ್ಕೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದು ಜನರು ಭಾವಿಸುವಂತಾಗಿದೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು," ಎನ್ನುತ್ತಾರೆ ನೀರವ್.
ಇದೇ ರೀತಿ ಫೋರಂ ಪಟೇಲ್ ಮತ್ತು ರೋಮಾ ಪಟೇಲ್ ಅವರ ಹೆಸರಲ್ಲಿಯೂ ಸಹಾಯಧನ ಬಿಡುಗಡೆಯಾಗಿದೆ. “ಆಧಾರ್‌ಗಳನ್ನು ನಂಬಿಕೆಯ ಮೇಲೆ ನೀಡಿದಾಗ ನೀಡಿದಾಗ, ಈ ರೀತಿ ದುರುಪಯೋಗವಾದರೆ ಸಾರ್ವಜನಿಕರು ಸರ್ಕಾರದ ವ್ಯವಸ್ಥೆಯನ್ನೇ ನಂಬಲಾರರು,” ಎನ್ನುತ್ತಾರೆ ಅವರು.
10 ವರ್ಷಗಳ ಹಿಂದೆ ನೀಡಿದ ದಾಖಲೆಗಳ ದುರುಪಯೋಗವಾಗಿದೆ ಎಂದು ಚರ್ಚ್ ಪ್ರದೇಶದ ನಿವಾಸಿ ರೋಮಿನ್ ಚಾರೆಲ್ ಹೇಳುತ್ತಾರೆ. "2014 ರಲ್ಲಿ ಮದುವೆ ಪ್ರಮಾಣಪತ್ರಕ್ಕಾಗಿ ನೀಡಿದ ಆಧಾರ್ ಕಾರ್ಡ್‌ಗಳನ್ನು ಈಗ ದುರುಪಯೋಗ ಮಾಡಿದ್ದಾರೆ. ಒಂದು ದಶಕದ ನಂತರ ಇಂತಹ ದುಷ್ಕೃತ್ಯ ಗೊತ್ತಾಗುತ್ತಿದೆ," ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಾಸವಿಲ್ಲದವರ ಹೆಸರಲ್ಲಿಯೂ ಸಹಾಯಧನ ಪಡೆದಿರುವ ಮಾಹಿತಿ ಹೊರ ಬಂದಿದೆ. ಫಝಲ್ ವಾಡಿಯಾ ಎಂಬವರು ತಮ್ಮ ಸಹೋದರಿಯ ಹೆಸರಲ್ಲಿಯೂ ಶೌಚಾಲಯಕ್ಕೆ ಹಣ ಬಿಡುಗಡೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ. "ಅವರು ಈಗ ಅಂಕಲೇಶ್ವರದಲ್ಲಿ ವಾಸವಿಲ್ಲ. ಆದರೆ ಸಹಾಯಧನ ಬಿಡುಗಡೆ ಆಗಿದೆ," ಎಂದು ಅವರು ಆರೋಪಿಸಿದ್ದಾರೆ.
ಶೌಚಾಲಯಕ್ಕೆ ಸಹಾಯಧನ ನೀಡುವ ಪಟ್ಟಿಯಲ್ಲಿ ಕೆಲವು ವಿಚಿತ್ರ ವಿವರಗಳು ಪತ್ತೆಯಾಗಿದೆ. ವಿಭಿನ್ನ ಧರ್ಮಗಳ ಕುಟುಂಬಗಳಿಗೆ ಒಂದೇ ವಿಳಾಸದಲ್ಲಿ ಶೌಚಾಲಯ ಸಹಾಯಧನವನ್ನು ನೀಡಲಾಗಿದೆ. ‘‘ಒಂದೇ ಮನೆಯಲ್ಲಿ ವಿಭಿನ್ನ ಧರ್ಮದ ಕುಟುಂಬಗಳು ಹೇಗೆ ಸೇರಬಹುದು? ಇದು ದಾಖಲೆಗಳಲ್ಲಿ, ಭಾರೀ ಅಕ್ರಮವನ್ನು ಸೂಚಿಸುತ್ತದೆ,’’ ಇಂದು ಆರ್ ಟಿ ಕಾರ್ಯಕರ್ತ ಪ್ರವೀಣ್ ಮೋದಿ ಹೇಳಿದ್ದಾರೆ.
ಶೌಚಾಲಯದ ಸಹಾಯಧನ ಹಗರಣದ ಕುರಿತು ತಕ್ಷಣವೇ ತನಿಖೆ ನಡೆಸುವಂತೆ, ತಪ್ಪಿತಸ್ಥರನ್ನು ಬಯಲಿಗೆಳೆಯುವಂತೆ ಆರ್‌ಟಿಐ ಕಾರ್ಯಕರ್ತ ಪ್ರವೀಣ್ ಮೋದಿ ಅವರು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಡಿಎಸ್ಪಿ ಗೆ ಈ ಕುರಿತು ಲಿಖಿತ ದೂರು ನೀಡಿದ್ದಾರೆ. ಹಲವಾರು ಸರ್ಕಾರಿ ಅಧಿಕಾರಿಗಳು ಹಾಗೂ ಖಾಸಗಿ ಏಜೆನ್ಸಿಗಳ ಬೆಂಬಲದೊಂದಿಗೆ ಈ ಹಗರಣ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.