×
Ad

ಗುಜರಾತ್ | ಎರಡು ದಿನಗಳ 84ನೇ ಕಾಂಗ್ರೆಸ್ ಅಧಿವೇಶನ ಆರಂಭ; ಬೃಹತ್ ಸಾಂಸ್ಥಿಕ ಪುನರ್‌ರಚನೆಗೆ ಪಕ್ಷ ಸಜ್ಜು

Update: 2025-04-08 21:52 IST

ಸಾಂದರ್ಭಿಕ ಚಿತ್ರ | PC : PTI

ಅಹ್ಮದಾಬಾದ್: ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಗುಜರಾತಿನ ಅಹ್ಮದಾಬಾದ್‌ ನಲ್ಲಿ 64 ವರ್ಷಗಳ ಬಳಿಕ ಕಾಂಗ್ರೆಸ್‌ ನ ಎರಡು ದಿನಗಳ 84ನೇ ಅಧಿವೇಶನ ಮಂಗಳವಾರದಿಂದ ಆರಂಭಗೊಂಡಿದೆ.

ಗುಜರಾತಿನಲ್ಲಿ ಈ ಹಿಂದೆ 1961ರಲ್ಲಿ ಭಾವನಗರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು.

ಮಂಗಳವಾರ ಅಹ್ಮದಾಬಾದ್‌ ನಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರತಿಪಾದಿಸಿದ್ದ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಸಾಗುವುದಾಗಿ ಪ್ರತಿಜ್ಞೆ ಮಾಡಿದರು.

ಇಲ್ಲಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಸ್ಮಾರಕದಲ್ಲಿ ನಡೆದ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಎಸ್) ಸಭೆಯ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು, ಪಕ್ಷವು ಈ ವರ್ಷವನ್ನು ಸಂಘಟನೆಯ ಸಂಪೂರ್ಣ ಪುನರ‌್ರಚನೆಗಾಗಿ ಮೀಸಲಿರಿಸಿದೆ ಮತ್ತು ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ತಿಳಿಸಿದರು.

‘ನಾವು ಬೃಹತ್ ಸಾಂಸ್ಥಿಕ ಪುನರ‌್ರಚನೆಯನ್ನು ಮಾಡಲಿದ್ದೇವೆ. ನಮ್ಮ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ಅದಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದಾರೆ’ ಎಂದು ತಿಳಿಸಿದ ವೇಣುಗೋಪಾಲ್, ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರಗಳನ್ನು ನೀಡುವ ಕ್ರಮಗಳನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಒತ್ತಿ ಹೇಳಿದರು.

ವಿಸ್ತೃತ ಸಿಡಬ್ಲ್ಯುಸಿ ಸಭೆಯು ‘ನಮ್ಮ ಪಕ್ಷವು ಸರ್ದಾರ್ ಪಟೇಲ್‌ ಜಿ ಅವರು ತೋರಿಸಿರುವ ಮಾರ್ಗದಲ್ಲಿ ನಡೆಯುತ್ತದೆ’ ಎಂಬ ನಿರ್ಣಯವನ್ನು ಅಂಗೀಕರಿಸಿದೆ ಎಂದು ಹೇಳಿದ ವೇಣುಗೋಪಾಲ್, 'ಪಟೇಲ್ ಅವರು ಕಾರ್ಮಿಕರು ಮತ್ತು ರೈತರ ಹಕ್ಕುಗಳಿಗಾಗಿ ಹೋರಾಡುತ್ತ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ನಿಂತಿದ್ದರು. ಮಹಾತ್ಮಾ ಗಾಂಧಿಯವರ ಹತ್ಯೆಯ ಬಳಿಕ ಅವರು ಕೋಮುಶಕ್ತಿಗಳನ್ನು ತಿರಸ್ಕರಿಸಿದ್ದರು. ಎಲ್ಲರೂ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಹೊಂದಿರುವ ಭಾರತಕ್ಕಾಗಿ ಅವರು ಹೋರಾಡಿದ್ದರು. ಇಂದು ನಾವು ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಸಾಗುತ್ತಿರುವಾಗ ನಮ್ಮ ನ್ಯಾಯ ಪಥವು ಸರ್ದಾರ್ ಪಟೇಲ್ ಅವರ ತತ್ವಗಳನ್ನೇ ಅನುಸರಿಸುತ್ತದೆ’ ಎಂದು ಹೇಳಿದರು.

► ಪಟೇಲ್ ಪರಂಪರೆಯನ್ನು ಕಿತ್ತುಕೊಳ್ಳಲು ಬಿಜೆಪಿ, ಆರೆಸ್ಸೆಸ್ ಪ್ರಯತ್ನಿಸುತ್ತಿವೆ: ಖರ್ಗೆ

ಸಭೆಯಲ್ಲಿ ತನ್ನ ಆರಂಭಿಕ ಭಾಷಣದಲ್ಲಿ ಸರ್ದಾರ್ ಪಟೇಲ್ ಅವರ ಪರಂಪರೆಯ ಮೇಲೆ ಕಾಂಗ್ರೆಸ್ ಹಕ್ಕನ್ನು ಪ್ರತಿಪಾದಿಸಿದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮಹಾನ್ ರಾಷ್ಟ್ರೀಯ ನಾಯಕರ ವಿರುದ್ಧ ಯೋಜಿತ ಪಿತೂರಿಯಡಿ ಬಿಜೆಪಿ ಮತ್ತು ಆರೆಸ್ಸೆಸ್ ಈ ಪರಂಪರೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ಮಹಾತ್ಮಾ ಗಾಂಧಿ ಮತ್ತು ಪಟೇಲ್ ಅವರ ಪರಂಪರೆಯನ್ನು ಮುಂದಕ್ಕೊಯ್ಯಲಿದೆ ಎಂದು ಅವರು ಒತ್ತಿ ಹೇಳಿದರು.

ದಾದಾಭಾಯಿ ನವರೋಜಿ, ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದನ್ನು ಉಲ್ಲೇಖಿಸಿದ ಖರ್ಗೆ, ಗುಜರಾತಿನ ಈ ಮೂವರು ಮಹಾನ್ ನಾಯಕರು ಕಾಂಗ್ರೆಸ್‌ ಅನ್ನು ಜಾಗತಿಕವಾಗಿ ಬೆಳೆಸಿದ್ದರು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News