ಕುಲ್ಗಾಮ್ ನಲ್ಲಿ ಮೂರನೇ ದಿನವೂ ಗುಂಡಿನ ಕಾಳಗ; ಇಬ್ಬರು ಉಗ್ರರ ಹತ್ಯೆ
PC: PTI
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲಗಾಮ್ನ ಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸತತ ಮೂರನೇ ದಿನವೂ ಗುಂಡಿನ ಕಾಳಗ ಮುಂದುವರಿದಿದ್ದು, ಇದು ಈ ವರ್ಷದಲ್ಲಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ನಡೆಯುತ್ತಿರುವ ಅತಿಧೀರ್ಘ ಕಾರ್ಯಾಚರಣೆ ಎನಿಸಿದೆ.
ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರ ಮೃತಪಟ್ಟಿರುವುದನ್ನು ಸೇನೆ ದೃಢಪಡಿಸಿದೆ. ಆದರೆ ಪೊಲೀಸರು ಮತ್ತೊಬ್ಬ ಉಗ್ರ ಹತನಾಗಿರುವುದಾಗಿ ಹೇಳಿದ್ದಾರೆ. ಇಬ್ಬರ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ.
ಕುಲಗಾಮ್ ಜಿಲ್ಲೆಯ ಅಖಲ್ ಖುಲ್ಸನ್ ಅರಣ್ಯದಲ್ಲಿ ಶನಿವಾರವಿಡೀ ಗುಂಡಿನ ಕಾಳಗ ಮತ್ತು ಸ್ಫೋಟದ ಸದ್ದು ಕೇಳಿಬಂತು. ಐವರು ಉಗ್ರರು ಅರಣ್ಯದಲ್ಲಿ ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆ, ಜಮ್ಮು & ಕಾಶ್ಮೀರ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ಉಂಪು ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಸಂಘರ್ಷ ಆರಂಭವಾಯಿತು. ಶೋಧ ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಲಾಗಿದ್ದು, ಸೇನಾಪಡೆ ಪ್ರತ್ಯುತ್ತರ ನೀಡಿದೆ.
ಉಳಿದ ಉಗ್ರರು ತಪ್ಪಿಸಿಕೊಳ್ಳದಂತೆ ಇಡೀ ಪ್ರದೇಶಕ್ಕೆ ಸರ್ಪಗಾವಲು ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದು, ಇನ್ನೂ ಕೆಲ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ. ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.