"ಎಲ್ಲದಕ್ಕೂ ಮಿತಿಯಿದೆ": ಪ್ರಧಾನಿ ಮೋದಿ, ಆರೆಸ್ಸೆಸ್ ಕುರಿತ ಪೋಸ್ಟ್‌ಗಳಿಗಾಗಿ ವ್ಯಂಗ್ಯಚಿತ್ರಕಾರನಿಗೆ ಸುಪ್ರೀಂಕೋರ್ಟ್ ತರಾಟೆ
ಹೇಮಂತ್ ಮಾಳವೀಯ | PC : indiatoday.in
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್‌ಗೆ ಸಂಬಂಧಿಸಿದ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಕಂಟೆಂಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತೀವ್ರ ತರಾಟೆಗೆತ್ತಿಕೊಂಡಿತು. ಆದಾಗ್ಯೂ ಅದು ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನೀಡಿತು.
ಆದರೂ ಮಾಳವೀಯ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿದರೆ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲು ಮಧ್ಯಪ್ರದೇಶ ಸರಕಾರವು ಮುಕ್ತವಾಗಿದೆ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ ಕುಮಾರ ಅವರ ಪೀಠವು ಎಚ್ಚರಿಕೆ ನೀಡಿತು.
ಹಿಂದಿಯಲ್ಲಿ ಮಾತನಾಡಿದ ನ್ಯಾ.ಧುಲಿಯಾ,‘ಹದ್ ಹೈ!ಲೋಗ್ ಕಿಸೀ ಕೋ ಭಿ,ಕುಛ್ ಬಿ ಕೆಹ್ ದೇತೆ ಹೈಂ (ಎಲ್ಲದಕ್ಕೂ ಮಿತಿಯಿದೆ. ಇಂದು ಜನರು ಯಾರಿಗೂ ಏನು ಬೇಕಾದರೂ ಬರೆಯುತ್ತಾರೆ,ಏನು ಬೇಕಾದರೂ ಹೇಳುತ್ತಾರೆ) ಎಂದು ಕಟುವಾಗಿ ನುಡಿದರು.
ಆ.15ರ ನಂತರ ಮುಂದಿನ ವಿಚಾರಣೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೀಯ ಪೋಸ್ಟ್‌ಗಳನ್ನು ಎದುರಿಸುವ ಮಾರ್ಗೋಪಾಯಗಳ ಕುರಿತು ಆದೇಶವನ್ನು ಹೊರಡಿಸುವ ಸುಳಿವನ್ನು ನ್ಯಾಯಾಲಯವು ನೀಡಿತು.
‘ಈ ಪ್ರಕರಣದಲ್ಲಿ ನಾವು ಏನೇ ಮಾಡಬಹುದು,ಆದರೆ ಇದು ಖಂಡಿತವಾಗಿಯೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗದ ಪ್ರಕರಣವಾಗಿದೆ’ ಎಂದು ನ್ಯಾಯಾಲಯವು ಹೇಳಿತು.
ಮೋದಿ ಮತ್ತು ಆರೆಸ್ಸೆಸ್ ಸ್ವಯಂಸೇವಕರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ವ್ಯಂಗ್ಯಚಿತ್ರಗಳಿಗೆ ಸಂಬಂಧಿಸಿದಂತೆ ಮಾಳವೀಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೋಸ್ಟ್‌ಗಳನ್ನು 2021ರಲ್ಲಿ ಮಾಡಲಾಗಿತ್ತಾದರೂ ಇತ್ತೀಚಿಗೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತೆ ಅವುಗಳನ್ನು ಶೇರ್ ಮಾಡಿದ್ದಾರೆ.
ಜು.3ರಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದ ಬಳಿಕ ಮಾಳವೀಯ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.