ರಾಜಕೀಯ ಲಾಭಕ್ಕಾಗಿ ಹಾಜಿ ಮಲಂಗ್ ದರ್ಗಾವನ್ನು ದೇವಳ ಎನ್ನಲಾಗುತ್ತಿದೆ: ದರ್ಗಾದ ಟ್ರಸ್ಟಿ ಚಂದ್ರಹಾಸ್ ಕೇತ್ಕರ್
ಹಾಜಿ ಮಲಂಗ್ ದರ್ಗಾ | Photo: indianexpress.com
ಮುಂಬೈ: ಮಹಾರಾಷ್ಟ್ರದ ಮಲಂಗ್ಗಡ್ ಎಂಬಲ್ಲಿರುವ ಶತಮಾನಗಳಷ್ಟು ಹಳೆಯದಾದ ಹಾಜಿ ಮಲಂಗ್ ದರ್ಗಾ ಹಿಂದೆ ದೇವಸ್ಥಾನವಾಗಿತ್ತು ಎಂಬ ಬಲಪಂಥೀಯ ಗುಂಪುಗಳ ಹೇಳಿಕೆಗಳ ನಡುವೆ ಅದನ್ನು “ಮುಕ್ತಗೊಳಿಸುವುದಾಗಿ” ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದರೆ ದರ್ಗಾದ ಮೂವರು ಟ್ರಸ್ಟಿಗಳ ಪೈಕಿ ಓರ್ವರಾದ ಚಂದ್ರಹಾಸ್ ಕೇತ್ಕರ್ ಅವರು ಪ್ರತಿಕ್ರಿಯಿಸಿ “ಈ ದರ್ಗಾ ಒಂದು ದೇವಸ್ಥಾನವೆಂದು ಹೇಳುತ್ತಿರುವವರು ರಾಜಕೀಯ ಲಾಭಕ್ಕಾಗಿ” ಎಂದಿದ್ದಾರೆ. ಕೇತ್ಕರ್ ಅವರ ಕುಟುಂಬ ಕಳೆದ 14 ತಲೆಮಾರುಗಳಿಂದ ಈ ದರ್ಗಾದ ಆಡಳಿತದ ಭಾಗವಾಗಿದೆ ಎಂದು indianexpress.com ವರದಿ ಮಾಡಿದೆ.
“1954ರಲ್ಲಿ ಕೇತ್ಕರ್ ಕುಟುಂಬದೊಳಗೆ ದರ್ಗಾದ ಆಡಳಿತದ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದರ್ಗಾವನ್ನು ಹಿಂದು ಅಥವಾ ಮುಸ್ಲಿಂ ಕಾನೂನಿನಡಿಯಲ್ಲಿ ನಿರ್ವಹಿಸಲಾಗದು ಬದಲು ಅದರ ವಿಶೇಷ ಪದ್ಧತಿಯಾನುಸಾರ ಅಥವಾ ಟ್ರಸ್ಟ್‌ಗಳ ಸಾಮಾನ್ಯ ಕಾನೂನುಗಳಡಿ ನಿರ್ವಹಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈಗ ಈ ವಿಚಾರವನ್ನು ತಮ್ಮ ಮತ ಬ್ಯಾಂಕಿಗಾಗಿ ರಾಜಕೀಯ ಮುಖಂಡರು ಎತ್ತುತ್ತಿದ್ಧಾರೆ,” ಎಂದು ಅವರು ಹೇಳಿದ್ದಾರೆ.
ಪ್ರತಿ ವರ್ಷ ಈ ದರ್ಗಾಗೆ ಸಾವಿರಾರು ಭಕ್ತರು ಬರುತ್ತಾರೆ ಎಂದು ಟ್ರಸ್ಟಿ ಕುಟುಂಬದ ಭಾಗವಾಗಿರುವ ಅಭಿಜಿತ್ ಕೇತ್ಕರ್ ಹೇಳುತ್ತಾರೆ.