×
Ad

ಟಿವಿ ಚರ್ಚೆಗಳಲ್ಲಿ 'ಭಾರತವನ್ನು ನಿಂದಿಸಲು' ಅರ್ನಬ್ ಗೋಸ್ವಾಮಿ ಪಾಕಿಸ್ತಾನದ ಪ್ಯಾನೆಲಿಸ್ಟ್‌ಗಳಿಗೆ ಹಣ ನೀಡುತ್ತಿದ್ದರು: ಪತ್ರಕರ್ತ ಹಾಮಿದ್ ಮೀರ್ ಗಂಭೀರ ಆರೋಪ

Update: 2025-06-09 21:54 IST

ಅರ್ನಬ್ ಗೋಸ್ವಾಮಿ , ಹಾಮಿದ್ ಮೀರ್ | PC: AFP, @thecurrentpk/YouTube

ಹೊಸದಿಲ್ಲಿ: ಟೆಲಿವಿಷನ್ ರೇಟಿಂಗ್ ಪಾಯಿಂಟ್(ಟಿಆರ್‌ಪಿ) ಹೆಚ್ಚಿಸಲು ಖಾಸಗಿ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ತಮ್ಮ ಚಾನೆಲ್‌ನಲ್ಲಿ ನಡೆಯುವ ಚರ್ಚೆಗಳ ಸಮಯದಲ್ಲಿ ಭಾರತವನ್ನು ನಿಂದಿಸಲು ಪಾಕಿಸ್ತಾನದ ಪ್ಯಾನೆಲಿಸ್ಟ್‌ಗಳಿಗೆ ಹಣ ನೀಡುತ್ತಾರೆ ಎಂದು ಪಾಕಿಸ್ತಾನದ ಖ್ಯಾತ ಪತ್ರಕರ್ತ ಹಾಮಿದ್ ಮೀರ್ ಗಂಭೀರ ಆರೋಪ ಮಾಡಿದ್ದಾರೆ.

ಪಾಕಿಸ್ತಾನ ಮೂಲದ ಡಿಜಿಟಲ್ ಸುದ್ದಿ ಸಂಸ್ಥೆ 'ದಿ ಕರೆಂಟ್'ಗೆ ನೀಡಿದ ಸಂದರ್ಶನದಲ್ಲಿ ಹಾಮಿದ್ ಮೀರ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಸಂದರ್ಶನದಲ್ಲಿ ಅರ್ನಬ್ ಗೋಸ್ವಾಮಿ ಜೊತೆಗಿನ ತನ್ನ ಆರಂಭಿಕ ಸಂವಹನವನ್ನು ಹಾಮಿದ್ ಮೀರ್ ವಿವರಿಸಿದರು. ಅರ್ನಬ್ ಗೋಸ್ವಾಮಿ ಸರಿಸುಮಾರು 20 ರಿಂದ 22 ವರ್ಷಗಳ ಹಿಂದೆ ಎನ್‌ಡಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಮೊದಲ ಬಾರಿಗೆ ದಿಲ್ಲಿಯಲ್ಲಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆಗ ಅವರು ಕೇವಲ ಪತ್ರಕರ್ತರಾಗಿದ್ದರು. ಎನ್‌ಡಿಟಿವಿಯನ್ನು ತೊರೆದು ಟೈಮ್ಸ್ ನೌಗೆ ಸೇರಿದ ನಂತರ ಅವರು ನನ್ನನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದರು. ಅವರು ನನಗೆ ಕರೆ ಮಾಡಿ 'ಹಮೀದ್ ಭಾಯ್' ಎಂದು ಕರೆಯುತ್ತಿದ್ದರು. ನನ್ನನ್ನು 'ಭಾಯಿ' ಎಂದು ಯಾರು ಕರೆದರೂ ಅವರನ್ನು ನಾನು ಒಪ್ಪಿಕೊಳ್ಳುತ್ತೇನೆ. ಅರ್ನಬ್‌ ಅವರ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೆ ಎಂದು ಹೇಳಿದ್ದಾರೆ.

ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಟಿವಿಯನ್ನು ಪ್ರಾರಂಭಿಸಿದಾಗ ಎಲ್ಲವೂ ಬದಲಾಗಿದೆ. ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ರಿಪಬ್ಲಿಕ್ ಟಿವಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ನನಗೆ ತಿಳಿಯಿತು. ಅರ್ನಬ್ ಪಾಕಿಸ್ತಾನದ ಬುದ್ಧಿಜೀವಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಚರ್ಚೆಗೆ ಆಹ್ವಾನಿಸುತ್ತಾರೆ, ಅವರಿಗೆ ಹಣ ನೀಡುತ್ತಾರೆ ಮತ್ತು ಲೈವ್‌ ಕಾರ್ಯಕ್ರಮದಲ್ಲಿ 'ಭಾರತವನ್ನು ನಿಂದಿಸಲು' ಸೂಚಿಸುತ್ತಾರೆ ಎಂದು ಅನೇಕ ಜನರು ನನಗೆ ಹೇಳಿದರು ಎಂದು ಹಾಮಿದ್ ಮೀರ್ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಬಗ್ಗೆ ಅರ್ನಬ್‌ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೆಲ ಅತಿಥಿಗಳಲ್ಲಿ ನಾನು ವೈಯಕ್ತಿಕವಾಗಿ ಕೇಳಿದೆ ಎಂದು ಮೀರ್ ಹೇಳಿದರು. ʼಅವರು ನನಗೆ, 'ಹೌದು, ನಮಗೆ ಹಣ ನೀಡಲಾಗುತ್ತದೆ ಮತ್ತು ನಾವು ಭಾರತವನ್ನು ನಿಂದಿಸುತ್ತೇವೆ' ಎಂದು ಹೇಳಿದರು. ಗೋಸ್ವಾಮಿ ಇದನ್ನು ಏಕೆ ಬಯಸುತ್ತಾರೆ ಎಂದು ನಾನು ಕೇಳಿದೆ, ಆಗ ಅವರು, ಭಾರತವನ್ನು ದೂಷಿಸಲು ಅವರು ನಮಗೆ ಮೂರು ನಿಮಿಷಗಳನ್ನು ನೀಡುತ್ತಾರೆ. ನಂತರ ಅವರು ಹತ್ತು ನಿಮಿಷ ಪಾಕಿಸ್ತಾನವನ್ನು ದೂಷಿಸುತ್ತಾರೆ. ಆ ರೀತಿಯಲ್ಲಿ ಅವರ ಟಿಆರ್‌ಪಿಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ರಾವಲ್ಪಿಂಡಿ ಧ್ವಂಸಗೊಂಡಿದೆ ಎಂದು ಗೋಸ್ವಾಮಿ ಸುಳ್ಳು ಹೇಳಿದರು. ನಾನು ರಾವಲ್ಪಿಂಡಿಗೆ ಭೇಟಿ ನೀಡಿದ್ದೆ, ಅಲ್ಲಿನ ವೀಡಿಯೊ ರೆಕಾರ್ಡ್ ಮಾಡಿ ಅದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದೆ. ಅವರಿಗೆ ಅದು ಇಷ್ಟವಾಗಲಿಲ್ಲ. ಅವರು ಈಗ ಪತ್ರಕರ್ತನಾಗಿಲ್ಲ. ಆದ್ದರಿಂದ, ಅವರಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News