ಕೈಕೋಳ ಹಾಕಿ ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದ ಹರ್ಜಿತ್ ಕೌರ್ ರ ಏಕೈಕ ಬಯಕೆ ಏನು?
PC : NDTV
ಚಂಡೀಗಢ: ಸುಮಾರು 30 ವರ್ಷಕ್ಕೂ ಹೆಚ್ಚು ಹಿಂದೆ ತಮ್ಮ ಇಬ್ಬರು ಮಕ್ಕಳೊಂದಿಗೆ ಹರ್ಜಿತ್ ಕೌರ್ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ, ಮೂಲತಃ ಪಂಜಾಬ್ ನವರಾದ ಅವರು ಈ ದಿನ ಬರುತ್ತದೆಂದು ಎಣಿಸಿರಲಿಲ್ಲ.
ಕ್ಯಾಲಿಫೋರ್ನಿಯಾದ ದಾಖಲೆರಹಿತ ವಲಸಿಗರಾದ ಹರ್ಜಿತ್ ಕೌರ್, ಅಮೆರಿಕದಲ್ಲಿ ಕೆಲಸ ಮಾಡುತ್ತಾ, ತಮ್ಮ ತೆರಿಗೆಗಳನ್ನು ಪಾವತಿಸುತ್ತಿದ್ದರು ಹಾಗೂ ಕಾನೂನಿನ ಅಗತ್ಯದನ್ವಯ ಪ್ರತಿ ಆರು ತಿಂಗಳಿಗೊಮ್ಮೆ ಅಮೆರಿಕ ಪ್ರಾಧಿಕಾರಗಳೆದುರು ನಿಯಮಿತವಾಗಿ ಹಾಜರಾಗುತ್ತಿದ್ದರು.
ಆದರೆ, 2025ರ ಹೊತ್ತಿಗೆ ಐದು ಮೊಮ್ಮಕ್ಕಳ ಅಜ್ಜಿಯಾದ ಹರ್ಜಿತ್ ಕೌರ್ ರನ್ನು ಯಾವುದೇ ಆಹಾರ ಮತ್ತು ಔಷಧಿಗಳನ್ನು ನೀಡದೆ ಸುದೀರ್ಘ ಕಾಲ ಜೈಲಿನಲ್ಲಿರಿಸಿ, ನಂತರ ಕೈಕೋಳ ತೊಡಿಸಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.
ಮೂರು ದಶಕಗಳ ಕಾಲ ಅಮೆರಿಕದಲ್ಲಿದ್ದ ತಮ್ಮ ಕುಟುಂಬವನ್ನು ಬುಡಮೇಲು ಮಾಡಿದ ಕ್ರಮದ ಆಘಾತದಿಂದ ಹರ್ಜಿತ್ ಕೌರ್ ಇನ್ನಷ್ಟೇ ಹೊರ ಬರಬೇಕಿದೆ. ತಮ್ಮ ದಿಢೀರ್ ಗಡೀಪಾರಿನ ಕಾರಣದ ಬಗ್ಗೆ ಅವರಿಗೆ ಇಂದಿಗೂ ಏನೂ ತಿಳಿದಿರದಿದ್ದರೂ, ವಲಸಿಗರ ಮೇಲೆ ದಣಿವರಿಯದ ಟ್ರಂಪ್ ಆಡಳಿತದ ಪ್ರಹಾರ ಹಾಗೂ ಸಹಾನುಭೂತಿಯ ಕೊರತೆ ಈ ಕ್ರಮಕ್ಕೆ ಕಾರಣ ಎಂಬುದರತ್ತ ಬೊಟ್ಟು ಮಾಡಲಾಗುತ್ತಿದೆ.
ತಮ್ಮ ಗಡಿಪಾರಿನ ವೇಳೆ ವಲಸೆ ಹಾಗೂ ಸುಂಕ ಜಾರಿ ಇಲಾಖೆ ತಮಗೆ ಕೈಕೋಳ ತೊಡಿಸಿ ಬಂಧಿಸಿದ್ದನ್ನು ಒತ್ತಿ ಬರುತ್ತಿದ್ದ ಅಳುವನ್ನು ತಡೆದುಕೊಂಡು ಅವರು ಸ್ಮರಿಸುತ್ತಾರೆ.
“ನಾನು ಪ್ರತಿ ಆರು ತಿಂಗಳಿಗೊಮ್ಮೆ ಹಾಜರಾತಿ ಹಾಕುತ್ತಿದ್ದೆ. ಸೆಪ್ಟೆಂಬರ್ 8ರಂದು ನಾನು ಕೇಂದ್ರಕ್ಕೆ ಹೋದಾಗ, ಅವರು ನನ್ನನ್ನು ಎರಡು ಗಂಟೆಗಳ ಕಾಯುವಂತೆ ಮಾಡಿದರು. ನಂತರ ಅವರು ನನಗೆ ಒಂದು ಕಾಗದಕ್ಕೆ ಸಹಿ ಮಾಡುವಂತೆ ಸೂಚಿಸಿದರು. ಆದರೆ, ನನ್ನ ವಕೀಲರಿಲ್ಲದೆ ನಾನ್ಯಾವುದಕ್ಕೂ ಸಹಿ ಮಾಡುವುದಿಲ್ಲ ಎಂದು ನಾನು ನಿರಾಕರಿಸಿದೆ. ನನ್ನ ಬೆರಳಚ್ಚಿದೆ ಎಂದು ಅಧಿಕಾರಿಗಳು ನನಗೆ ತಿಳಿಸಿದರು. ನಾವು ನಿಮ್ಮನ್ನು ಬಂಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಅದಕ್ಕೆ ಯಾವುದೇ ಕಾರಣವನ್ನು ಅವರು ನೀಡಲಿಲ್ಲ” ಎಂದು ಅಳಲು ತೋಡಿಕೊಳ್ಳುತ್ತಾರೆ.
ಟ್ರಂಪ್ ಆಡಳಿತವು ಅಕ್ರಮ ವಲಸಿಗರ ಮೇಲೆ ಪ್ರಹಾರ ಪ್ರಾರಂಭಿಸಿದ ನಂತರ, ಅಮೆರಿಕದಿಂದ ಗಡಿಪಾರಾಗಿರುವ 2,400ಕ್ಕೂ ಹೆಚ್ಚು ಭಾರತೀಯರ ಪೈಕಿ ಹರ್ಜಿತ್ ಕೌರ್ ಕೂಡಾ ಒಬ್ಬರು. ಅವರು ಎರಡು ದಿನಗಳ ಹಿಂದೆ ಕೈದಿಗಳಿಗೆ ನೀಡುವ ಸಮವಸ್ತ್ರದೊಂದಿಗ ಭಾರತಕ್ಕೆ ಆಗಮಿಸಿದ್ದಾರೆ.
73 ವರ್ಷದ ಹರ್ಜಿತ್ ಕೌರ್ ಭಾರತಕ್ಕೆ ಮರಳಿದ್ದರೂ, ತಮ್ಮನ್ನು ದಿಢೀರನೆ ಗಡೀಪಾರು ಮಾಡಲು ಕಾರಣವೇನು ಎಂದು ಅವರಿಗೆ ಇಂದಿಗೂ ತಿಳಿದಿಲ್ಲ. ಆದರೆ, ಅವರಿಗಿರುವ ಏಕೈಕ ಬಯಕೆ ಅಮೆರಿಕದಲ್ಲಿರುವ ತಮ್ಮ ಮೊಮ್ಮಕ್ಕಳನ್ನು ಕೂಡಿಕೊಳ್ಳುವುದು.
“ನನ್ನ ಮನವಿಯೆಂದರೆ, ನನ್ನನ್ನು ನನ್ನ ಕುಟುಂಬದ ಬಳಿ ಮರಳಿ ಕಳಿಸಬೇಕು ಎಂದು” ಎಂದು ಅವರು ಗದ್ಗದಿತರಾಗುತ್ತಾರೆ.
ಸೌಜನ್ಯ: ndtv.com