×
Ad

ಪಂಜಾಬಿನಲ್ಲಿ ಸರಣಿ ಗ್ರೆನೇಡ್ ದಾಳಿಗಳ ರೂವಾರಿ ಹರ್ಪ್ರೀತ್ ಸಿಂಗ್ ಅಮೆರಿಕದಲ್ಲಿ ಬಂಧನ

Update: 2025-04-18 20:30 IST

ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ | PC : hindustantimes.com

ಹೊಸದಿಲ್ಲಿ: ಪಂಜಾಬಿನಲ್ಲಿ ಹಲವು ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದ ದೇಶಭ್ರಷ್ಟ ಗ್ಯಾಂಗ್‌ಸ್ಟರ್ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ ಶುಕ್ರವಾರ ಅಮೆರಿಕದ ಸಾಕ್ರಾಮೆಂಟೊದಲ್ಲಿ ಎಫ್‌ಬಿಐ ಬಲೆಗೆ ಬಿದ್ದಿದ್ದಾನೆ.

ಎರಡು ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪುಗಳೊಂದಿಗೆ ನಂಟು ಹೊಂದಿರುವ ಪಾಸಿಯಾ ಕಾನೂನುಬಾಹಿರವಾಗಿ ಅಮೆರಿಕವನ್ನು ಪ್ರವೇಶಿಸಿದ್ದ ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಬರ್ನರ್ ಫೋನ್(ಬಳಕೆಯ ಬಳಿಕ ಎಸೆಯಬಹುದಾದ ಅಗ್ಗದ ಫೋನ್)ಗಳನ್ನು ಬಳಸುತ್ತಿದ್ದ ಎಂದು ಎಫ್‌ಬಿಐ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದೆ.

ಪಾಸಿಯಾ ಪಾಕಿಸ್ತಾನದ ಐಎಸ್‌ಐ ಮತ್ತು ಖಾಲಿಸ್ತಾನಿ ಭಯೋತ್ಪಾದಕ ಗುಂಪು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್(ಬಿಕೆಐ) ಜೊತೆ ಶಾಮೀಲಾಗಿದ್ದ ಎಂದು ಶಂಕಿಸಲಾಗಿದೆ ಎಂದೂ ಎಫ್‌ಬಿಐ ಹೇಳಿದೆ.

ಸಿಂಗ್ ಪಾಕಿಸ್ತಾನದಲ್ಲಿರುವ ಗ್ಯಾಂಗ್‌ಸ್ಟರ್ ಪರಿವರ್ತಿತ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾನ ನಿಕಟವರ್ತಿ ಎನ್ನಲಾಗಿದೆ.

ಎನ್‌ಐಎ ಈ ಹಿಂದೆ ಪಾಸಿಯಾ ಕುರಿತು ಮಾಹಿತಿಗಾಗಿ ಐದು ಲಕ್ಷ ರೂ.ಗಳ ಬಹುಮಾನವನ್ನು ಪ್ರಕಟಿಸಿತ್ತು. ಆತ ಪಂಜಾಬಿನಲ್ಲಿ ಕನಿಷ್ಠ 18 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದು,ಹೆಚ್ಚಿನವು ಭಯೋತ್ಪಾದನೆ ಮತ್ತು ಕೋಮು ಅಶಾಂತಿಗೆ ಪ್ರಚೋದನೆ ಯತ್ನಗಳಿಗೆ ಸಂಬಂಧಿಸಿವೆ.

ಪಾಸಿಯಾ ಮತ್ತು ರಿಂಡಾ 2023ರಿಂದ ಪೋಲಿಸ್ ಠಾಣೆಗಳು, ಧಾರ್ಮಿಕ ಸ್ಥಳಗಳು ಹಾಗೂ ಮಾಜಿ ಜಲಂಧರ ಎಸ್‌ಪಿ ಜಸ್‌ಕೀರತ್ ಸಿಂಗ್ ಚಹಾಲ್ ಮತ್ತು ಬಜೆಪಿ ನಾಯಕ ಮನೋರಂಜನ ಕಾಲಿಯಾ ಸೇರಿದಂತೆ ಸಾರ್ವಜನಿಕ ವ್ಯಕ್ತಿಗಳ ನಿವಾಸಗಳನ್ನು ಗುರಿಯಾಗಿಸಿಕೊಂಡು ಸರಣಿ ಗ್ರೆನೇಡ್ ದಾಳಿಗಳಿಗೆ ಸಂಚು ರೂಪಿಸಿದ್ದ ಆರೋಪಿಗಳಾಗಿದ್ದಾರೆ.

ಸೆ.11,2024ರಂದು ಇಬ್ಬರು ಯುವಕರು ಚಂಡಿಗಡದಲ್ಲಿಯ ಸಿಂಗ್ ನಿವಾಸದ ಮೇಲೆ ಹ್ಯಾಂಡ್ ಗ್ರೆನೇಡ್ ಎಸೆದಿದ್ದರು. ಪಾಸಿಯಾ ಸೂಚನೆಯ ಮೇರೆಗೆ ಅವರು ಈ ಕೃತ್ಯವನ್ನು ನಡೆಸಿದ್ದರು ಎನ್ನಲಾಗಿದೆ.

ಚಂಡಿಗಡ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದ ಎನ್‌ಐಎ,ಪಾಸಿಯಾ ವಿರುದ್ಧ ಬಂಧನ ವಾರಂಟ್ ಕೋರಿ ಅರ್ಜಿ ಸಲ್ಲಿಸಿತ್ತು. ಪಾಸಿಯಾ ಮತ್ತು ರಿಂಡಾ ದಾಳಿಕೋರರಿಗೆ ಶಸ್ತ್ರಾಸ್ತ್ರಗಳು,ಹಣಕಾಸು ಮತ್ತು ಲಾಜಿಸ್ಟಿಕ್ ಬೆಂಬಲವನ್ನು ಒದಗಿಸಿದ್ದರು ಎಂದು ಅದು ತಿಳಿಸಿತ್ತು.

ರಿಂಡಾ ಕೆನಡಾದ ಖಾಲಿಸ್ತಾನ್ ಪ್ರತ್ಯೇಕತಾವಾದಿ ಲಖ್ಬೀರ್ ಸಿಂಗ್ ಸಂಧು ಜೊತೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾನೆ ಮತ್ತು ಪಂಜಾಬಿನಲ್ಲಿ ಮಾಡ್ಯೂಲ್‌ಗಳನ್ನು ಸ್ಥಾಪಿಸಲು ಪಾಸಿಯಾ ಜೊತೆ ಕೈಜೋಡಿಸಿದ್ದಾನೆ ಎನ್ನುವುದನ್ನು ಕೇಂದ್ರೀಯ ಏಜೆನ್ಸಿಗಳು 2023ರಲ್ಲಿ ಪತ್ತೆ ಹಚ್ಚಿದ್ದವು.

ಚಂಡಿಗಡ ದಾಳಿಯು ನಿಷೇಧಿತ ಗುಂಪು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ್ನು ಒಳಗೊಂಡ ವ್ಯಾಪಕ ಸಂಚಿನ ಭಾಗವಾಗಿತ್ತು ಎಂದು ಎನ್‌ಐಎ ಪ್ರತಿಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News