×
Ad

ಮಹಿಳಾ ದಿನಾಚರಣೆ | 12 ಪುರುಷರ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆಗೆ ಹರ್ಯಾಣ ಮುಖ್ಯಮಂತ್ರಿಯಿಂದ ಸನ್ಮಾನ!

Update: 2025-03-11 19:30 IST

ನಾಯಬ್ ಸಿಂಗ್ ಸೈನಿ | PC :  Facebook

ಗುರುಗ್ರಾಮ: ಹರ್ಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿಯವರು ಮಹಿಳಾ ದಿನದಂದು ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ಒಂದು ತಿಂಗಳು ಜೈಲುವಾಸವನ್ನು ಅನುಭವಿಸಿದ್ದ ಜಿಂದ್ನ ಸಾಮಾಜಿಕ ಕಾರ್ಯಕರ್ತೆಗೆ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಪ್ರದಾನಿಸಿದ್ದು,ಇದು ರಾಜ್ಯದ ಬಿಜೆಪಿ ಸರಕಾರಕ್ಕೆ ಮುಜುಗರವನ್ನುಂಟು ಮಾಡಿದೆ.

ರೇಖಾ ಧಿಮಾನ್ 2020ರಲ್ಲಿ 12 ಪುರುಷರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ ಮಹಿಳೆಯಾಗಿದ್ದಾರೆ. ಹಿಂದೆಯೂ ಈಕೆ ಸುಳ್ಳು ಪೋಲಿಸ್ ದೂರುಗಳನ್ನು ಸಲ್ಲಿಸಿದ್ದರು ಎನ್ನುವುದನ್ನು ನ್ಯಾಯಾಲಯದ ದಾಖಲೆಗಳು ತೋರಿಸಿವೆ.

ರವಿವಾರ ಹರ್ಯಾಣ ಮುಖ್ಯಮಂತ್ರಿಗಳ ಕಚೇರಿಯು ಈ ವಿಷಯದಲ್ಲಿ ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದೆ. ತಪ್ಪಿತಸ್ಥರೆಂದು ಕಂಡು ಬಂದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅದು ಸೂಚಿಸಿದೆ.

ಸೋಮವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹರ್ಯಾಣ ಸರಕಾರದ ಮಾಧ್ಯಮ ಸಂಯೋಜಕ ಅಶೋಕ ಛಾಬ್ರಾ ಅವರು, ಮುಖ್ಯಮಂತ್ರಿ ಸೈನಿಯವರು ಈ ಲೋಪವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ವರದಿಯನ್ನು ಕೇಳಿದ್ದಾರೆ ಎಂದು ತಿಳಿಸಿದರು.

ವಿವಾದವು ಮಾ.8ರಂದು ನಡೆದಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 50 ಮಹಿಳೆಯರನ್ನು ಸನ್ಮಾನಿಸಿದ್ದ ಸೈನಿ, ಧಿಮಾನ್ಗೆ ಇಂದಿರಾ ಗಾಂಧಿ ಮಹಿಳಾ ಶಕ್ತಿ ಪ್ರಶಸ್ತಿಯನ್ನು ಪ್ರದಾನಿಸಿದ್ದರು.

ಸುದ್ದಿಸಂಸ್ಥೆಯು ಧಿಮಾನ್ರನ್ನು ಸಂಪರ್ಕಿಸಿದಾಗ, ಇಂದಿರಾ ಗಾಂಧಿ ಪ್ರಶಸ್ತಿಗಾಗಿ ತಾನು ಜಿಂದ್ ಜಿಲ್ಲೆಯ ನರ್ವಾನ ಉಪವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದೆ. ಒಂದು ತಿಂಗಳ ಹಿಂದೆ ಜಿಂದ್ನಲ್ಲಿ ಜಿಲ್ಲಾಧಿಕಾರಿಗಳು ತನ್ನ ಸಂದರ್ಶನ ನಡೆಸಿದ್ದರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸೂಕ್ತ ತನಿಖೆಯ ಬಳಿಕವೇ ತನ್ನ ಹೆಸರನ್ನು ಪ್ರಶಸಿಗಾಗಿ ಕಳುಹಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ, ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಆಕೆ ನಿರಾಕರಿಸಿದ್ದಾರೆ.

ಇಂದಿರಾ ಗಾಂಧಿ ಪ್ರಶಸ್ತಿಯು ಹರ್ಯಾಣ ಸರಕಾರವು ಸುಷ್ಮಾ ಸ್ವರಾಜ್ ಪ್ರಶಸ್ತಿಯ ನಂತರ ಮಹಿಳೆಯರಿಗೆ ನೀಡುತ್ತಿರುವ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ವರ್ಷ ಸುಷ್ಮಾ ಸ್ವರಾಜ್ ಪ್ರಶಸ್ತಿಯನ್ನು ಕರ್ನಾಲ್ನ ಶಾಂತಾ ರಂಗಾ ಅವರಿಗೆ ನೀಡಲಾಗಿದ್ದರೆ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಧೀಮನ್ ಮತ್ತು ಹಿಸಾರ್ನ ಬೇಲಾ ವರ್ಮಾ ಅವರಿಗೆ ಜಂಟಿಯಾಗಿ ನೀಡಲಾಗಿದೆ. ಸುಷ್ಮಾ ಸ್ವರಾಜ್ ಪ್ರಶಸ್ತಿಯು ಐದು ಲಕ್ಷ ರೂ.ನಗದು ಬಹುಮಾನ ಮತ್ತು ಪ್ರಮಾಣಪತ್ರ ಹಾಗೂ ಇಂದಿರಾ ಗಾಂಧಿ ಪ್ರಶಸ್ತಿಯು 1.5 ಲಕ್ಷ ರೂ.ನಗದು ಮತ್ತು ಪ್ರಮಾಣಪತ್ರವನ್ನು ಹೊಂದಿವೆ.

ಜಿಂದ್ನ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿರುವ ಧಿಮಾನ್, ಜಿಲ್ಲೆಯಲ್ಲಿ ಮಹಿಳೆಯರ ಸಮಸ್ಯೆಗಳನ್ನು ನಿರ್ವಹಿಸಲು ʼಉಡಾನ್ ಹೌಸ್ಲೋಂ ಕಿ ಫೌಂಡೇಷನ್ʼ ನಡೆಸುತ್ತಿದ್ದಾರೆ.

12 ವ್ಯಕ್ತಿಗಳು ತನಗೆ ಮಾದಕ ದ್ರವ್ಯ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಧಿಮಾನ್ ಸೆಪ್ಟಂಬರ್ 2020ರಲ್ಲಿ ಆರೋಪಿಸಿದ್ದರು. ತನಿಖೆಯ ಬಳಿಕ ಇವು ಸುಳ್ಳು ಆರೋಪಗಳು ಎನ್ನುವುದು ಬಯಲಾಗಿತ್ತು. ಇದಕ್ಕಾಗಿ 33 ದಿನಗಳ ಜೈಲುವಾಸವನ್ನು ಅನುಭವಿಸಿದ್ದ ಧಿಮಾನ್ ಸದ್ಯ ಜಾಮೀನಿನಲ್ಲಿ ಹೊರಗಿದ್ದು ,ಪ್ರಕರಣವು ಪಂಜಾಬ್ ಮತ್ತು ಹರ್ಯಾನ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News