×
Ad

ಐಪಿಎಸ್ ಅಧಿಕಾರಿ ಸಾವಿನ ಪ್ರಕರಣ: ಹರ್ಯಾಣ ಡಿಜಿಪಿಯನ್ನು ರಜೆಯ ಮೇಲೆ ಕಳುಹಿಸಿದ ಸರಕಾರ

ಪ್ರಧಾನಿಯ ಸೋನಿಪತ್ ರ‍್ಯಾಲಿ ರದ್ದು

Update: 2025-10-14 15:25 IST

ಡಿಜಿಪಿ ಶತ್ರುಜೀತ್ ಕಪೂರ್ (Photo: ANI)

ಚಂಡಿಗಡ: ಹರ್ಯಾಣ ಕೇಡರ್‌ನ ಐಪಿಎಸ್ ಅಧಿಕಾರಿ ವೈ.ಪೂರಣ್ ಕುಮಾರ್ ಅವರ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ ರಾಜ್ಯ ಸರಕಾರವು ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ರಜೆಯ ಮೇಲೆ ಕಳುಹಿಸಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅ.17ರ ಸೋನಿಪತ್ ಭೇಟಿಯನ್ನು ರದ್ದುಗೊಳಿಸಲಾಗಿದೆ.

ರಾಜ್ಯ ಸರಕಾರವು ಹರ್ಯಾಣ ಪೋಲಿಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹರ್ಯಾಣ ರಾಜ್ಯ ಮಾದಕದ್ರವ್ಯ ನಿಯಂತ್ರಣ ಬ್ಯೂರೋದ ಮಹಾ ನಿರ್ದೇಶಕರಾಗಿರುವ ಓಂ ಪ್ರಕಾಶ ಸಿಂಗ್ ಅವರಿಗೆ ಡಿಜಿಪಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿದೆ. ರೋಹ್ಟಕ್‌ನ ಆಗಿನ ಎಸ್‌ಪಿ ನರೇಂದ್ರ ಬಿಜರ್ನಿಯಾರನ್ನು ಇತ್ತೀಚಿಗೆ ಎತ್ತಂಗಡಿ ಮಾಡಲಾಗಿದ್ದು,ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಲಾಗಿಲ್ಲ.

ಮೃತ ಕುಮಾರ್ ಅವರು ಬರೆದಿಟ್ಟಿದ್ದ ಒಂಭತ್ತು ಪುಟಗಳ ಅಂತಿಮ ಟಿಪ್ಪಣಿಯಲ್ಲಿನ ಆರೋಪಗಳ ಬಳಿಕ ಹೆಚ್ಚುತ್ತಿರುವ ಒತ್ತಡಗಳ ನಡುವೆಯೇ ಬಿಜೆಪಿ ಸರಕಾರವು ಸೋಮವಾರ ತಡರಾತ್ರಿ ಡಿಜಿಪಿ ಅಮಾನತಿನ ನಿರ್ಧಾರವನ್ನು ಕೈಗೊಂಡಿದೆ. ಇದನ್ನು ಎಸ್‌ಸಿ ಸಮುದಾಯಕ್ಕೆ ಬಲವಾದ ಸಂದೇಶವನ್ನು ರವಾನಿಸಲು ಸರಕಾರದ ಪ್ರಯತ್ನ ಎಂದೂ ನೋಡಲಾಗಿದೆ.

ಕುಮಾರ್ ತನ್ನ ಟಿಪ್ಪಣಿಯಲ್ಲಿ ಕಪೂರ್ ಮತ್ತು ಬಿಜರ್ನಿಯಾ ಸೇರಿದಂತೆ ಎಂಟು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಜಾತಿಯಾಧಾರಿತ ತಾರತಮ್ಯ,ಮಾನಸಿಕ ಕಿರುಕುಳ,ಸಾರ್ವಜನಿಕ ಅವಮಾನ ಮತ್ತು ಅಧಿಕಾರ ದುರುಪಯೋಗದ ಆರೋಪಗಳನ್ನು ಹೊರಿಸಿದ್ದಾರೆ.

ಕುಮಾರ್ ಪತ್ನಿ,ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಪಿ.ಕುಮಾರ್ ಅವರು ತನ್ನ ಪತಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಕಪೂರ್ ಮತ್ತು ಬಿಜರ್ನಿಯಾ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸುವಂತೆ ಆಗ್ರಹಿಸಿದ್ದಾರೆ. ಸರಕಾರವು ಕ್ರಮ ಕೈಗೊಳ್ಳುವವರೆಗೆ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ ನೀಡಲು ಕುಟುಂಬವು ನಿರಾಕರಿಸಿದೆ.

ಪ್ರಧಾನಿ ಭೇಟಿ ರದ್ದು:

ಈ ನಡುವೆ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರದ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರ ಅ.17ರ ಸೋನಿಪತ್ ಭೇಟಿಯನ್ನು ರದ್ದುಗೊಳಿಸಲಾಗಿದೆ.

ಮೋದಿಯವರು ಸೋನಿಪತ್‌ನಲ್ಲಿ ‘ಜನ ವಿಶ್ವಾಸ-ಜನ ವಿಕಾಸ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದರು ಮತ್ತು ಹಲವಾರು ಹೊಸ ಉಪಕ್ರಮಗಳಿಗೆ ಚಾಲನೆ ನೀಡಲಿದ್ದರು. ಅವರ ಭೇಟಿ ರದ್ದತಿಗೆ ಅಧಿಕೃತ ಕಾರಣವನ್ನು ನೀಡಲಾಗಿಲ್ಲವಾದರೂ ಐಪಿಎಸ್ ಅಧಿಕಾರಿಯ ಆತ್ಮಹತ್ಯೆ ಬಳಿಕ ಪರಿಸ್ಥಿತಿ ಪ್ರಧಾನಿ ಭೇಟಿಗೆ ಪೂರಕವಾಗಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News