ಭೂಕಬಳಿಕೆ ಪ್ರಕರಣ: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನ್ಯಾಯಾಂಗ ನಿಂದನೆ ಕಲಾಪಕ್ಕೆ ಸುಪ್ರೀಂ ಕೋರ್ಟ್ ತಡೆ
ಎಚ್.ಡಿ.ಕುಮಾರಸ್ವಾಮಿ | PC : PTI
ಹೊಸದಿಲ್ಲಿ,ಜು.17: ಕರ್ನಾಟಕದ ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಭಾರೀ ಪ್ರಮಾಣದ ಭೂ ಅತಿಕ್ರಮಣ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ನ್ಯಾಯಾಂಗ ನಿಂದನೆ ಕಲಾಪದಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರನ್ನು ಕಕ್ಷಿದಾರರನ್ನಾಗಿಸುವ ಕರ್ನಾಟಕ ಉಚ್ಚ ನ್ಯಾಯಾಲಯದ ಎ.17ರ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ತಡೆಯನ್ನು ವಿಧಿಸಿದೆ.
ಹೈಕೋರ್ಟ್ ಆದೇಶದ ವಿರುದ್ಧ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಪಂಕಜ ಮಿತ್ತಲ್ ಮತ್ತು ಪಿ.ಬಿ.ವರಾಳೆ ಅವರ ಪೀಠವು ವಕೀಲ ಪ್ರಶಾಂತ ಭೂಷಣ ಅವರು ಪ್ರತಿನಿಧಿಸುತ್ತಿರುವ ಎನ್‌ಜಿಒ ‘ಸಮಾಜ ಪರಿವರ್ತನ ಸಮುದಾಯ’ಕ್ಕೆ ನೋಟಿಸನ್ನು ಹೊರಡಿಸಿತು.
ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ಕೇತಗಾನಹಳ್ಳಿಯಲ್ಲಿ ಭಾರೀ ಪ್ರಮಾಣದಲ್ಲಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಎನ್‌ಜಿಒ ಆರೋಪಿಸಿದೆ.
ವಿಭಾಗೀಯ ಪೀಠವು ಜ.14,2020ರಂದು ಹೊರಡಿಸಿದ್ದ ಆದೇಶವನ್ನು ಪಾಲಿಸದ ಆರೋಪದಲ್ಲಿ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ವಿಚಾರಣೆ ಬಾಕಿಯಿದೆ ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಹೈಕೋರ್ಟ್ ರಿಟ್ ಅರ್ಜಿಯಲ್ಲಿ ಮೇಲಿನ ಆದೇಶವನ್ನು ಕರ್ನಾಟಕ ಲೋಕಾಯುಕ್ತವು ಆ.5, 2014ರಂದು ಹೊರಡಿಸಿದ ಆದೇಶವನ್ನು ಸರಕಾರವು ಮೂರು ವಾರದೊಳಗೆ ಪಾಲಿಸಲಿದೆ ಎಂದು ತಿಳಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರ ಹೇಳಿಕೆಯ ಆಧಾರದಲ್ಲಿ ಹೊರಡಿಸಿತ್ತು ಎಂದು ಸರ್ವೋಚ್ಚ ನ್ಯಾಯಾಲಯವು ಬೆಟ್ಟು ಮಾಡಿತು.
ಲೋಕಾಯುಕ್ತವು ವಿವರವಾದ ಆದೇಶವನ್ನು ಹೊರಡಿಸಿತ್ತಾದರೂ ಅದು ಮಧ್ಯಂತರ ಸ್ವರೂಪದ್ದಾಗಿತ್ತು ಮತ್ತು ಬಳಿಕ ಮಾ.3,2021ರಂದು ಲೋಕಾಯುಕ್ತವು ವಿಚಾರಣೆಯನ್ನು ಮುಕ್ತಾಯಗೊಳಿಸಿತ್ತು ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತು.