ಗೂಗಲ್ AI ಹಬ್ ಆಂಧ್ರಕ್ಕೆ | ತಮಿಳುನಾಡಿಗೆ ಮೂರೇ ಪದಗಳಲ್ಲಿ ತಿರುಗೇಟು ನೀಡಿದ ಆಂಧ್ರದ ಸಚಿವ ನಾರಾ ಲೋಕೇಶ್
ನಾರಾ ಲೋಕೇಶ್ |Photo Credit : NDTV
ಹೊಸದಿಲ್ಲಿ: ಟೆಕ್ ದೈತ್ಯ ಸಂಸ್ಥೆ ಗೂಗಲ್ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 1.5 ಶತಕೋಟಿ ಡಾಲರ್ ವೆಚ್ಚದಲ್ಲಿ ಎಐ ಹಬ್ ಹಾಗೂ ಡಾಟಾ ಸೆಂಟರ್ ನಿರ್ಮಿಸಲು ಮುಂದಾಗಿರುವುದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಹಾಗೂ ವಿಪಕ್ಷ ಎಐಎಡಿಎಂಕೆ ನಡುವೆ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಗೂಗಲ್ ಸಿಇಒ ಸುಂದರ್ ಪಿಚ್ಚೈ ತವರು ರಾಜ್ಯ ತಮಿಳುನಾಡಾಗಿದ್ದರೂ, ಅವರು ಹೂಡಿಕೆಗಾಗಿ ನೆರೆಯ ಆಂಧ್ರಪ್ರದೇಶವನ್ನು ಆಯ್ದುಕೊಂಡಿರುವುದಕ್ಕೆ ಆಡಳಿತಾರೂಢ ಡಿಎಂಕೆ ಪಕ್ಷದ ಅಸಾಮರ್ಥ್ಯ ಕಾರಣ ಎಂದು ವಿಪಕ್ಷ ಎಐಎಡಿಎಂಕೆ ತರಾಟೆಗೆ ತೆತೆದುಕೊಂಡಿದೆ. ಇದರ ಬೆನ್ನಿಗೇ ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ನೀಡಿರುವ “ಅವರು ಭಾರತವನ್ನು ಆಯ್ದುಕೊಂಡಿದ್ದಾರೆ” ಎಂಬ ಮೂರು ಪದಗಳ ಉತ್ತರ ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಈ ಪೋಸ್ಟ್ ನೊಂದಿಗೆ ಅವರು ಭಾರತ ತ್ರಿವರ್ಣ ಧ್ವಜದ ಎಮೋಜಿಯನ್ನೂ ಹಾಕಿದ್ದಾರೆ
ಇದಕ್ಕೂ ಮುನ್ನ, ಬಿಜೆಪಿಯ ಮಿತ್ರಪಕ್ಷವಾದ ಎಐಎಡಿಕೆಯ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರು, ಗೂಗಲ್ ಸಿಇಒ ಸುಂದರ್ ಪಿಚ್ಚೈ ಮಧುರೈ ಮೂಲದವರಾಗಿದ್ದು, ಅವರೊಂದಿಗೆ ರಾಜ್ಯಕ್ಕೆ ಬಲವಾದ ಸಾಂಸ್ಕೃತಿಕ ನಂಟಿದ್ದರೂ, ಗೂಗಲ್ ಅನ್ನು ರಾಜ್ಯಕ್ಕೆ ಕರೆ ತರುವಲ್ಲಿ ಡಿಎಂಕೆ ಸರಕಾರ ವಿಫಲವಾಗಿದೆ ಎಂದು ಮುಖ್ಯಗಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಎಐಎಡಿಎಂಕೆ ನಾಯಕ ಆರ್.ಬಿ.ಉದಯಕುಮಾರ್ ಕೂಡಾ, ಗೂಗಲ್ ತನ್ನ ಎಐ ಹಬ್ ಹಾಗೂ ಡಾಟಾ ಸೆಂಟರ್ ಅನ್ನು ರಾಜ್ಯದಲ್ಲಿ ಸ್ಥಾಪಿಸುವ ಸುವರ್ಣಾವಕಾಶವನ್ನು ಡಿಎಂಕೆ ಸರಕಾರ ಕೈಚೆಲ್ಲಿದೆ ಎಂದು ಆರೋಪಿಸಿದ್ದರು.
“ಗೂಗಲ್ ಸಿಇಒ ಸುಂದರ್ ಪಿಚ್ಚೈ ತಮಿಳರಾಗಿದ್ದರೂ, ಅವರಿಗೆ ತಮಿಳುನಾಡಿನಲ್ಲಿ ಎಐ ಹಬ್ ಮತ್ತು ಡಾಟಾ ಸೆಂಟರ್ ಅನ್ನು ಸ್ಥಾಪಿಸುವಂತೆ ಆಹ್ವಾ ನ ನೀಡುವಲ್ಲಿ ಡಿಎಂಕೆ ಸರಕಾರ ವಿಫಲವಾಗಿದೆ” ಎಂದು ಅವರು ಟೀಕಿಸಿದ್ದರು. ಡಿಎಂಕೆ ಸರಕಾರದ ಸಕ್ರಿಯ ಮಾತುಕತೆ ಹಾಗೂ ದೂರದೃಷ್ಟಿಯ ಕೊರತೆಯಿಂದ ಭಾರಿ ಮೌಲ್ಯದ ಈ ಯೋಜನೆಯು ಆಂಧ್ರದಪ್ರದೇಶದ ಪಾಲಾಗಿದೆ” ಎಂದೂ ಅವರು ಡಿಎಂಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದಕ್ಕೆ ಡಿಎಂಕೆ ಪರವಾಗಿ ಪ್ರತಿಕ್ರಿಯಿಸಿದ್ದ ತಮಿಳುನಾಡು ಕೈಗಾರಿಕಾ ಸಚಿವ ರಾಜಾ, ರಾಜ್ಯವು ಅದಕ್ಕಿಂತಲೂ ಬೃಹತ್ತಾದ 15,000 ಕೋಟಿ ರೂ. ಮೌಲ್ಯದ ಹೂಡಿಕೆಯನ್ನು ಆ್ಯಪಲ್ ಸಾಧನಗಳು, ಐಫೋನ್ ಗಳನ್ನು ತಯಾರಿಸುವ ತೈವಾನ್ ಮೂಲದ ಬಹುರಾಷ್ಟ್ರೀಯ ಇಲೆಕ್ಟ್ರಾನಿಕ್ಸ್ ತಯಾರಿಕಾ ಸಂಸ್ಥೆಯಾದ ಫಾಕ್ಸ್ ಕಾನ್ ನಿಂದ ಸ್ವೀಕರಿಸುವುದರಲ್ಲಿದೆ” ಎಂದು ತಿರುಗೇಟು ನೀಡಿದ್ದರು.
ಇದಕ್ಕೂ ಮುನ್ನ, ಗೂಗಲ್ ಎಐ ಹಬ್ ಮತ್ತು ಡಾಟಾ ಸೆಂಟರ್ ಯೋಜನೆ ವಿಶಾಖಪಟ್ಟಣಂ ಪಾಲಾಗಿರುವ ಕುರಿತು ನಾರಾ ಲೋಕೇಶ್ ಹಾಗೂ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೂ ವಾಕ್ಸಮರ ನಡೆದಿತ್ತು. ಆಂಧ್ರಪ್ರದೇಶ ತೆರಿಗೆ ವಿನಾಯಿತಿಯ ಆಮಿಷವೊಡ್ಡುವ ಮೂಲಕ ಕೈಗಾರಿಕೋದ್ಯಮಿಗಳನ್ನು ತನ್ನತ್ತ ಸೆಳೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರೆ, ಕರ್ನಾಟಕದಲ್ಲಿನ ಮೂಲಸೌಕರ್ಯ ಕೊರತೆಗಳಿಂದ ಕೈಗಾರಿಕೋದ್ಯಮಿಗಳೇ ನಮ್ಮ ರಾಜ್ಯದತ್ತ ಮುಖ ಮಾಡಿದ್ದಾರೆ ಎಂದು ನಾರಾ ಲೋಕೇಶ್ ತಿರುಗೇಟು ನೀಡಿದ್ದರು.
ಈ ಕುರಿತ ಚರ್ಚೆ ಉಭಯ ರಾಜ್ಯಗಳಲ್ಲೂ ಬಿಸಿಯೇರಿದ ವಾಗ್ವಾದಕ್ಕೆ ಸಾಕ್ಷಿಯಾಗಿತ್ತು.