×
Ad

ತರಬೇತಿ ಸಂದರ್ಭ ಅಂಗವೈಕಲ್ಯಕ್ಕೆ ತುತ್ತಾಗುವ ಸೇನಾ ಕೆಡೆಟ್‌ ಗಳಿಗೆ ಆರೋಗ್ಯ ಯೋಜನೆ ವಿಸ್ತರಣೆ

Update: 2025-08-29 21:30 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ. 29: ತರಬೇತಿ ಸಂದರ್ಭ ಅಂಗವೈಕಲ್ಯಕ್ಕೆ ತುತ್ತಾಗಿ ಬಿಡುಗಡೆಯಾದ ಸೇನಾ ಕೆಡೆಟ್‌ ಗಳು ಮಾಜಿ ಸೈನಿಕರ ಆರೋಗ್ಯ ಯೋಜನೆ ಅಡಿಯಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಶುಕ್ರವಾರ ವರದಿ ಮಾಡಿದೆ.

ಇಂತಹ ಕೆಡೆಟ್‌ ಗಳು ಹಿಂದೆ ಈ ಯೋಜನೆಗೆ ಅನರ್ಹರಾಗಿದ್ದರು. ಏಕೆಂದರೆ, ಅವರಿಗೆ ಮಾಜಿ ಸೈನಿಕರ ಸ್ಥಾನ ಮಾನ ಇರಲಿಲ್ಲ. ಈಗ ಈ ಯೋಜನೆಯ ಭಾಗವಾಗಿ ಅವರು ಪಾಲಿಕ್ಲಿನಿಕ್‌ ಗಳಲ್ಲಿ ಉಚಿತ ಹೊರ ರೋಗಿ ಸೇವೆಗಳನ್ನು ಹಾಗೂ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ಹೇಳಿದೆ.

ಈ ಕುರಿತಂತೆ ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ವಿಭಾಗ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ಸೇನಾಪಡೆ, ನೌಕಾ ಪಡೆ, ವಾಯು ಪಡೆಯ ಮುಖ್ಯಸ್ಥರಿಗೆ ಪತ್ರ ಜಾರಿಗೊಳಿಸಿದೆ.

ತರಬೇತು ಸಂದರ್ಭ ಅಂಗವೈಕಲ್ಯದಿಂದ ಬಳಲುವ ಕೆಡೆಟ್‌ ಗಳಿಗೆ ಮಾಜಿ ಸೈನಿಕರ ಆರೋಗ್ಯ ಯೋಜನೆ ಉಚಿತವಾಗಿರುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಮಾಜಿ ಸೈನಿಕರು ಪಾವತಿಸಬೇಕಾದ ಒಂದು ಬಾರಿಯ ಚಂದಾದಾರಿಕೆ ಶುಲ್ಕ 1.2 ಲಕ್ಷ ರೂ.ವನ್ನು ಈ ಕೆಡೆಟ್‌ ಗಳು ಪಾವತಿಸಬೇಕಾಗಿಲ್ಲ.

ಆದರೆ, ಈ ಸೌಲಭ್ಯ ಕೆಡೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಅವರ ಕುಟುಂಬಕ್ಕೆ ಅಲ್ಲ ಎಂದು ಪತ್ರ ಸ್ಪಷ್ಟಪಡಿಸಿರುವುದಾಗಿ ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕೇಂದ್ರ ಸರಕಾರ ಹಾಗೂ ಶಸಸ್ತ್ರ ಪಡೆಗಳ ಪ್ರತಿಕ್ರಿಯೆ ಕೇಳಿದ 11 ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News