ಈ ವಾರ ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
PC : PTI
ಹೊಸದಿಲ್ಲಿ: ಕರ್ನಾಟಕ,ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಈ ವಾರದಲ್ಲಿ ಭಾರೀ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಎಚ್ಚರಿಕೆ ನೀಡಿದೆ. ಕೆಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ತೀವ್ರ ಪ್ರಮಾಣದ ಮಳೆಯಾಗಲಿದೆ. ಒಟ್ಟಾರೆ 26 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮಳೆಯ ಹಾವಳಿಯಿಂದ ಬಾಧಿತವಾಗಲಿವೆ ಎಂದು ಐಎಂಡಿ ತಿಳಿಸಿದೆ.
ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ ಹಾಗೂ ಗುಜರಾತ್ ಸೇರಿದಂತೆ ಪಶ್ಚಿಮ ಭಾರತ ಪ್ರಾಂತದಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕದ ಕರಾವಳಿ, ಉತ್ತರ ಕರ್ನಾಟಕದ ಒಳನಾಡಿನಲ್ಲಿಯೂ ಧಾರಾಕಾರ ಮಳೆಯಾಗಲಿದೆ. ಕೇರಳ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿಯೂ ವ್ಯಾಪಕ ಮಳೆ ಸುರಿಯಲಿದೆ.
ಆಗಸ್ಟ್ 19ರಿಂದ 24ರ ನಡುವೆ ಮಧ್ಯಪ್ರದೇಶ, ಚತ್ತೀಸ್‌ಗಡ, ಒಡಿಶಾ, ಬಿಹಾರ, ಜಾರ್ಖಂಡ್, ವಿದರ್ಭ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಆಗಸ್ಟ್ 19ರಿಂದ 24ರ ನಡುವೆ ಭಾರೀ ಮಳೆಯಾಗಲಿದೆಯೆಂದು ಐಎಂಡಿ ಭವಿಷ್ಯ ನುಡಿದಿದೆ.
ಉತ್ತರದ ರಾಜ್ಯಗಳಾದ ಹಿಮಾಚಲಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್, ಹರ್ಯಾಣ, ಚಂಡೀಗಡ ಹಾಗೂ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಕೆಲವು ರಾಜ್ಯಗಳೂ ಕೂಡಾ ಈ ಅವಧಿಯಲ್ಲಿ ಭಾರೀ ಮಳೆಯನ್ನು ಕಾಣಲಿವೆ
ಅಸ್ಸಾಂ, ಮೇಘಾಲಯ ಸೇರಿದಂತೆ ಈಶಾನ್ಯ ಭಾರತದಲ್ಲೂ ತೀವ್ರ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಹಾಗೂ ದಕ್ಷಿಣ ಭಾರತದ ರಾಜ್ಯಗಳ ಹಲವಾರು ಪ್ರಾಂತಗಳಲ್ಲಿ ಗುಡುಗುಮಿಂಚಿನ ಜೊತೆಗೆ ತಾಸಿಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾಗಿ ಗಾಳಿ ಬೀಸಲಿದೆ. ಜಮ್ಮುಕಾಶ್ಮೀರ ಸೇರಿದಂತೆ ಲಡಾಕ್,ಗಿಲ್ಗಿಟ್-ಬಾಲ್ಟಿಸ್ತಾನ ಹಾಗೂ ಮುಝಾಫರಾಬಾದ್ ಕೂಡಾ ತಾಸಿಗೆ 3-40 ಕಿ.ಮೀ. ವೇಗದ ಬಿರುಗಾಳಿಯಿಂದ ಕೂಡಿದ ಮಳೆಯಾಗಲಿದೆ.
ಭಾರೀ ಮಳೆ ಸಾಧ್ಯತೆಯ ಹಿನ್ನೆಲೆಯಲ್ಲಿ ದಿಲ್ಲಿ ಆಸುಪಾಸಿನ ಪ್ರಾಂತಗಳಾದ ನೊಯ್ಡಾ, ಗಾಝಿಯಾಬಾದ್ ಹಾಗೂ ಫರೀದಾಬಾದ್ ನಗರಗಳಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ.