×
Ad

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಿಮಧಾರೆ | ಯೆಲ್ಲೋ ಆಲರ್ಟ್ ಘೋಷಣೆ

Update: 2024-04-21 21:09 IST

PC: ANI 

ಶಿಮ್ಲಾ: ಹಿಮಾಚಲಪ್ರದೇಶದ ಎತ್ತರದ ಸ್ಥಳಗಳಲ್ಲಿ ಭಾರೀ ಹಿಮಸುರಿದಿದ್ದು, ಮಧ್ಯಮ ಹಾಗೂ ಕೆಳ ಪರ್ವತಪ್ರದೇಶಗಳಲ್ಲಿ ಕುಂಭದ್ರೋಣ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾಗೂ 104 ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನಾಲಿ-ಕೆಲಾಂಗ್ ಹೆದ್ದಾರಿಯಲ್ಲಿರುವ ಸಿಸ್ಸು ಸಮೀಪದ ಸೆಲ್ಫಿ ಪಾಯಿಂಟ್ನಲ್ಲಿ ಭಾರೀ ಭೂಕುಸಿತವಾಗಿದ್ದರಿಂದ ಕೆಲಾಂಗ್ಗೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ವ್ಯಾಪಕವಾಗಿ ಹಿಮಸುರಿದ ಪರಿಣಾಮವಾಗಿ ಲಾಹಾವುಲ್ ಹಾಗೂ ಸ್ಪಿಟಿಯ 99 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ರಾಜ್ಯದ ತುರ್ತುಸ್ಥಿತಿ ನಿರ್ವಹಣಾ ಕೇಂದ್ರ ತಿಳಿಸಿದೆ.

ರಸ್ತೆಗಳಲ್ಲಿ ಹರಡಿರುವ ಹಿಮದರಾಶಿಯನ್ನು ತೆರವುಗೊಳಿಸಲು ಗಡಿ ರಸ್ತೆಗಳ ಸಂಸ್ಥೆ (ಬಿಆರ್ಓ) ಸಿಬ್ಬಂದಿ ಹಾಗೂ ಯಂತ್ರಗಳನ್ನು ನಿಯೋಜಿಸಿದೆ. ಮುಂದಿನ 2-3 ತಾಸುಗಳಲ್ಲಿ ಸಂಚಾರವು ಪುನಾರಂಭಗೊಳ್ಳುವ ನಿರೀಕ್ಷೆಯಿದೆಯೆಂದು ಬಿಆರ್ಓ ವಕ್ತಾರರು ತಿಳಿಸಿದ್ದಾರೆ.

ಎಪ್ರಿಲ್ 22 ಹಾಗೂ 23ರಂದು ಹಿಮಾಚಲ ಪ್ರದೇಶದ ವಿವಿಧೆಡೆ ಗುಡುಗು ಸಹಿತ ಮಳೆಯಾಗಲಿದ್ದು ಸ್ಥಳೀಯ ಹವಾಮಾನ ಶಾಸ್ತ್ರಕೇಂದ್ರವು ಮುನ್ಸೂಚನೆ ಯೆಲ್ಲೊ ಅಲರ್ಟ್ ಘೋಷಿಸಿದೆ.

ಶಿಮ್ಲಾ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಯಾಗುತ್ತಿದೆ ಹಾಗೂ ಆಗಸದಲ್ಲಿ ದಟ್ಟವಾದ ಮೋಡಗಳು ಕವಿದಿವೆ.

ಬಿರುಗಾಳಿ ಹಾಗೂ ಅಲಿಕಲ್ಲು ಮಳೆಯು ಆ್ಯಪಲ್ ಹಾಗೂ ಗೋಧಿ ಬೆಳೆಗೆ ಹಾನಿಕರವಾಗಿರುವುದರಿಂದ ರೈತರು ಹಾಗೂ ಹಣ್ಣುಹಂಪಲು ಬೆಳೆಗಾರರು ಆತಂಕಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News