ಸಂಸತ್ ಭವನದ ಭದ್ರತೆ ಪರಿಶೀಲನೆಗೆ ಉನ್ನತಾಧಿಕಾರ ಸಮಿತಿ: ಸ್ಪೀಕರ್ ಓಂ ಬಿರ್ಲಾ
ಓಂ ಬಿರ್ಲಾ | Photo: PTI
ಹೊಸದಿಲ್ಲಿ: ಸಂಸತ್ ಭವನದ ಭದ್ರತಾ ಉಲ್ಲಂಘನೆ ಕುರಿತು ಆಳವಾಗಿ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿ ರೂಪಿಸಲಾಗಿದೆ ಎಂದು ಲೋಕಸಭೆ ಸ್ವೀಕರ್ ಓಂ ಬಿರ್ಲಾ ಅವರು ಶನಿವಾರ ಎಲ್ಲಾ ಸಂಸದರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಮಿತಿ ಕಾರ್ಯಾರಂಬಿಸಿದೆ. ಈ ಸಮಿತಿಯ ವರದಿಯನ್ನು ಶೀಘ್ರದಲ್ಲಿ ಸದನದಲ್ಲಿ ಹಂಚಿಕೊಳ್ಳಲಾಗುವುದು ಎಂದು ಬಿರ್ಲಾ ಅವರು ತನ್ನ ಪತ್ರದಲ್ಲಿ ಹೇಳಿದ್ದಾರೆ.
ಇದರೊಂದಿಗೆ, ಸಂಸತ್ ಭವನದ ಭದ್ರತೆಯ ವಿವಿದ ಅಂಶಗಳನ್ನು ಪರಿಶೀಲಿಸಲು ಹಾಗೂ ಡಿಸೆಂಬರ್ 13ರ ಘಟನೆ ಮರುಕಳಿಸದಿರಲು ಕ್ರಿಯಾ ಯೋಜನೆ ರೂಪಿಸಲು ಉನ್ನತಾಧಿಕಾರ ಸಮಿತಿಯನ್ನು ಕೂಡ ರೂಪಿಸಲಾಗಿದೆ ಎಂದು ಓಂ ಬಿರ್ಲಾ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಹೊಗೆ ಬಾಂಬ್ ಎಸೆದು ದಾಂಧಲೆ ಎಬ್ಬಿಸಿದ ಹಾಗೂ ಇತರ ಇಬ್ಬರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಕೆಲವು ದಿನಗಳ ದಿನಗಳ ಬಳಿಕ ಓಂ ಬಿರ್ಲಾ ಅವರು ಸಂಸದರಿಗೆ ಈ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಓಂ ಬಿರ್ಲಾ ಅವರು ಈ ಹಿಂದೆ ನಡೆದ ಇಂತಹ ಹಲವು ಘಟನೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ‘‘ಈ ಹಿಂದೆ ಸಂದರ್ಶಕರು ಪಿಸ್ತೂಲ್ ತಂದಿರುವ, ಘೋಷಣೆಗಳನ್ನು ಕೂಗಿರುವ, ಸಂದರ್ಶಕರ ಗ್ಯಾಲರಿಯಿಂದ ಜಿಗಿದಿರುವ ಹಾಗೂ ಕರಪತ್ರಗಳನ್ನು ಎಸೆದಿರುವ ಘಟನೆಗಳಿಗೆ ದೇಶ ಸಾಕ್ಷಿಯಾಗಿದೆ’’ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಸಂಸತ್ ಭವನದ ಭದ್ರತಾ ಉಲ್ಲಂಘನೆ ಹಾಗೂ ಸಂಸದರ ಅಮಾನತಿಗೆ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.