ಮೊಬೈಲ್ ಫೋನ್‌ನಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಪತ್ತೆ: ಹಿಮಾಚಲದಲ್ಲಿ ಯುವಕನ ಬಂಧನ
ಸಾಂದರ್ಭಿಕ ಚಿತ್ರ | PC : freepik.com
ಶಿಮ್ಲಾ: ದೇಶದ ಸಾರ್ವಭೌಮತೆ,ಏಕತೆ ಹಾಗೂ ಸಮಗ್ರತೆಯನ್ನು ಅಪಾಯಕ್ಕೊಡ್ಡುವಂತಹ ಸಂವೇದನಾತ್ಮಕ ವಿಷಯವು ಹಿಮಾಚಲ ಪ್ರದೇಶದ 18 ವರ್ಷ ವಯಸ್ಸಿನ ಯುವಕನೊಬ್ಬನ ಮೊಬೈಲ್ ಫೋನ್‌ನಲ್ಲಿ ಪತ್ತೆಯಾಗಿದ್ದು, ಆತನನ್ನು ಗುರುವಾರ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಕಾಂಗ್ರಾ ಜಿಲ್ಲೆಯ ಸುಕಾಹರ್ ಪಟ್ಟಣದ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ. ಈತ ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ತೊರೆದಿದ್ದ. ಆತನ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 152ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಪೊಲೀಸ್ ಮುಖ್ಯಕಾರ್ಯಾಲಯವು ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆ ತಿಳಿಸಿದೆ.
ಕಳೆದ ಹಲವಾರು ದಿನಗಳಿಂದ ಪೊಲೀಸರ ತಂಡವು ಶಂಕಿತ ಆರೋಪಿಯ ಮೇಲೆ ನಿಗಾವಿರಿಸಿತ್ತು ಹಾಗೂ ಆತನ ಬಗ್ಗೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿತ್ತು. ಗುರುವಾರದಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಓ) ದಾದಾಸೀಬಾ ನೇತೃತ್ವದ ವಿಶೇಷ ತಂಡವು ಆರೋಪಿಯ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ತೆಗೆದುಕೊಂಡಿದೆ.
ಅಭಿಷೇಕ್‌ನ ಮೊಬೈಲ್ ಫೋನ್‌ನಲ್ಲಿ ಸಂವೇದನಾತ್ಮಕ ಹಾಗೂ ಆಕ್ಷೇಪಾರ್ಹ ಅಂಶ ಪತ್ತೆಯಾಗಿದೆ ಎನ್ನಲಾಗಿದ್ದು, ದೆಹ್ರಾ ಪೊಲೀಸ್ ಠಾಣೆಯಲ್ಲಿ ಆತನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಸಿದ್ದಾರೆ.