ಹಿಮಾಚಲಪ್ರದೇಶ | ಆರ್ಥಿಕ ಮುಗ್ಗಟ್ಟಿನ ನಡುವೆ ರಾಜ್ಯಪಾಲರಿಗೆ 92 ಲಕ್ಷ ರೂ. ಮೌಲ್ಯದ ಮರ್ಸಿಡಸ್ ಬೆಂಝ್ ಕಾರು ಖರೀದಿಗೆ ಅನುಮೋದನೆ!
Image: @SukhuSukhvinder
ಧರ್ಮಶಾಲಾ, ಜು.31: ಹಿಮಾಚಲ ಪ್ರದೇಶ ಸರಕಾರ ತೀವ್ರ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದು, 2025-26ನೇ ಸಾಲಿನ ವಿತ್ತೀಯ ಕೊರತೆ 1 ಲಕ್ಷ ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ. ಇಂತಹ ತೀವ್ರ ಆರ್ಥಿಕ ಮುಗ್ಗಟ್ಟಿನ ನಡುವೆಯೂ, ರಾಜ್ಯಪಾಲರು ನೂತನ ಮರ್ಸಿಡಸ್ ಬೆಂಝ್ ಕಾರು ಖರೀದಿಸಲು 92 ಲಕ್ಷ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಹರ್ಷವರ್ಧನ್ ಚೌಹಾಣ್, “ರಾಜ್ಯಪಾಲರು ಬಳಸುತ್ತಿರುವ ಹಾಲಿ ಮರ್ಸಿಡಸ್ ಬೆಂಝ್ ಕಾರು ತನ್ನ ಜೀವಿತಾವಧಿಯನ್ನು ಪೂರೈಸಿದೆ. ಅವರಿಗಾಗಿ ನೂತನ ಕಾರು ಖರೀದಿಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ. ಸದ್ಯ ರಾಜ್ಯಪಾಲ ಶುಕ್ಲಾ ಅವರು 2019ರಲ್ಲಿ ಖರೀದಿಸಲಾಗಿದ್ದ ಮರ್ಸಿಡಸ್ 350 ಕಾರನ್ನು ಬಳಕೆ ಮಾಡುತ್ತಿದ್ದಾರೆ. ಈ ವೇಳೆ ರಾಜ್ಯಪಾಲರಾಗಿದ್ದ ಆಚಾರ್ಯ ದೇವ್ರತ್ ಅವರಿಗಾಗಿ ಈ ಕಾರನ್ನು ಖರೀದಿಸಲಾಗಿತ್ತು. ಇದಕ್ಕೂ ಮುನ್ನ, 2013ರಲ್ಲಿ ಖರೀದಿಸಲಾಗಿದ್ದ ಮರ್ಸಿಡಸ್ 250 ಕಾರು ರಾಜಭವನದ ಉಪಯೋಗಕ್ಕಾಗಿ ಬಳಕೆಯಾಗುತ್ತಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ರಾಜಭವನದ ಹಿರಿಯ ಅಧಿಕಾರಿಯೊಬ್ಬರು, “ನಾವು ಯಾಂತ್ರಿಕ ತಪಾಸಣೆ ಒಳಗೊಂಡಂತೆ ಎಲ್ಲ ಬಗೆಯ ಸಮರ್ಪಕ ಪರಿಶೀಲನೆಗಳನ್ನು ನಡೆಸಿದ್ದು, ಈ ಸಂಬಂಧ ರಾಜ್ಯ ಸರಕಾರಕ್ಕೆ ಪ್ರಸ್ತಾವವೊಂದನ್ನು ರವಾನಿಸಿದ್ದೆವು. ಅದನ್ನು ತೀರ್ಮಾನಿಸುವುದು ರಾಜ್ಯ ಸರಕಾರಕ್ಕೆ ಬಿಟ್ಟಿದ್ದು. ಇಲ್ಲಿಯವರೆಗೆ ನಾವು ಈ ಕುರಿತಂತೆ ಯಾವುದೇ ಅಧಿಕೃತ ಸಂವಹನವನ್ನು ಸ್ವೀಕರಿಸಿಲ್ಲ” ಎಂದು ತಿಳಿಸಿದ್ದಾರೆ.
ಮಾದಕ ದ್ರವ್ಯ ಜಾಲದ ಕುರಿತು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹಾಗೂ ರಾಜ್ಯಪಾಲ ಶುಕ್ಲಾರ ನಡುವೆ ಮಾತಿನ ಚಕಮಕಿ ನಡೆದ ಬೆನ್ನಿಗೇ, ಈ ನಿರ್ಧಾರ ಹೊರ ಬಿದ್ದಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿಗೆ ಒಪ್ಪಿಗೆ ಸೂಚಿಸಿದ ಸಚಿವ ಸಂಪುಟ
ಮಹತ್ವದ ಚುನಾವಣಾ ಸುಧಾರಣೆಯಲ್ಲಿ, ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿಯನ್ನು ಕ್ಯಾಬಿನೆಟ್ ಅನುಮೋದಿಸಿದೆ. ಇಲ್ಲಿಯವರೆಗೆ, ಎಸ್‌ಸಿ/ಎಸ್‌ಟಿ ಸಮುದಾಯಗಳು ಮತ್ತು ಮಹಿಳೆಯರಿಗೆ ಮಾತ್ರ ಮೀಸಲಾತಿ ಸೀಮಿತವಾಗಿತ್ತು. ಮೀಸಲಾತಿಯನ್ನು ಅಂತಿಮಗೊಳಿಸಲು ಹಿಂದುಳಿದ ವರ್ಗಗಳ ವಾರ್ಡ್‌ವಾರು ಜನಸಂಖ್ಯಾ ಅಂಕಿ ಅಂಶಗಳನ್ನು ಸಂಗ್ರಹಿಸಲು ಶೀಘ್ರದಲ್ಲೇ ಆಯೋಗವನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ 76 ಸ್ಥಳೀಯ ಸಂಸ್ಥೆಗಳಿವೆ. ಈ ಸಂಸ್ಥೆಗಳಿಗೆ ಕೊನೆಯ ಚುನಾವಣೆಗಳು 2021ರ ಮಾರ್ಚ್ ನಲ್ಲಿ ನಡೆದಿತ್ತು. ಮುಂದಿನ ಚುನಾವಣೆ 2026 ರಲ್ಲಿ ನಡೆಯಲಿದೆ.