×
Ad

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದುರ್ಗಾ ವಾಹಿನಿ ಸಂಸ್ಥಾಪಕಿ ಋತಂಭರಗೆ ಪದ್ಮಭೂಷಣ ಪ್ರಶಸ್ತಿ

Update: 2025-01-26 12:24 IST

ದುರ್ಗಾ ವಾಹಿನಿಯ ಸಂಸ್ಥಾಪಕಿ ಋತಂಭರ (X/Amit Malviya) 

ಹೊಸದಿಲ್ಲಿ : ಅಯೋಧ್ಯೆ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಂಧಿತರಾಗಿದ್ದ ಹಿಂದುತ್ವವಾದಿ ನಾಯಕಿ ಋತಂಭರ ಶನಿವಾರ ಪ್ರಕಟಿಸಲಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರಿದ್ದಾರೆ.

ಪದ್ಮ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾ ದಿನ ಘೋಷಿಸಲಾಗುತ್ತದೆ. ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಮಾರ್ಚ್ ಅಥವಾ ಎಪ್ರಿಲ್ ನಲ್ಲಿ ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಘಟಕ ದುರ್ಗಾ ವಾಹಿನಿಯ ಸಂಸ್ಥಾಪಕಿ ಋತಂಭರ ಅವರಿಗೆ ಸಮಾಜ ಸೇವೆ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 1980 ಮತ್ತು 1990ರ ದಶಕದಲ್ಲಿ, ಅಯೋಧ್ಯೆಯಲ್ಲಿ ರಾಮ ಮಂದಿರ ಅಭಿಯಾನದ ಸಂದರ್ಭದಲ್ಲಿ ಋತಂಭರ ದೇಶಾದ್ಯಂತ ಭಾಷಣಗಳನ್ನು ಮಾಡಿದ್ದರು. ಬಾಬರಿ ಮಸೀದಿಯನ್ನು ಡಿಸೆಂಬರ್ 6, 1992ರಂದು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಈ ಘಟನೆಯು ದೇಶಾದ್ಯಂತ ಕೋಮುಗಲಭೆಗೆ ಕಾರಣವಾಗಿತ್ತು. ಅಯೋಧ್ಯೆ ಬಾಬರಿ ಮಸೀದಿ ಧ್ವಂಸದ ದಿನ ಅಲ್ಲಿದ್ದ ಹಿಂದುತ್ವವಾದಿ ನಾಯಕರಲ್ಲಿ ಋತಂಭರ ಕೂಡ ಸೇರಿದ್ದರು. ಮೂರು ದಿನಗಳ ನಂತರ ಪ್ರಚೋದನೆ ಆರೋಪದಲ್ಲಿ ಋತಂಭರ ಅವರನ್ನು ಬಂಧಿಸಲಾಗಿತ್ತು.

ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು ಆರೋಪಿಸಿರುವ 32 ಮಂದಿಯಲ್ಲಿ ಋತಂಭರ ಕೂಡ ಸೇರಿದ್ದರು. ಸೆಪ್ಟೆಂಬರ್ 2020ರಲ್ಲಿ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. 2009ರಲ್ಲಿ ಬಾಬರಿ ಮಸೀದಿ ಧ್ವಂಸದ ಕುರಿತು ತನಿಖೆಗೆ ಕೇಂದ್ರದಿಂದ ನಿಯೋಜಿಸಲ್ಪಟ್ಟ ಲಿಬರ್ಹಾನ್ ಆಯೋಗವು, ದೇಶವನ್ನು ಕೋಮು ವೈಷಮ್ಯದ ಅಂಚಿಗೆ ಕೊಂಡೊಯ್ಯಲು ಕಾರಣರು ಎಂದು ಹೇಳಿದ 68 ಆರೋಪಿಗಳಲ್ಲಿ ಋತಂಭರ ಕೂಡ ಸೇರಿದ್ದರು.

ಇದಲ್ಲದೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ಮತ್ತು ವೇದ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News