ಬಿಹಾರದಲ್ಲಿ ‘ಮರ್ಯಾದಾ ಹತ್ಯೆ’ಪ್ರಕರಣ; ಅಳಿಯನನ್ನು ಗುಂಡಿಟ್ಟು ಕೊಂದ ಮಾವ
ದರ್ಭಂಗಾ,ಆ.6: ಶಂಕಿತ ‘ಮರ್ಯಾದಾ ಹತ್ಯೆ’ ಪ್ರಕರಣದಲ್ಲಿ ಇಲ್ಲಿಯ ದರ್ಭಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಡಿಎಂಸಿಎಚ್)ಯಲ್ಲಿ 25ರ ಹರೆಯದ ಯುವಕನೋರ್ವನನ್ನು ಆತನ ಮಾವ ಗುಂಡಿಟ್ಟು ಕೊಂದಿದ್ದಾನೆ ಎಂದು ಪೋಲಿಸರು ಬುಧವಾರ ತಿಳಿಸಿದರು.
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ದ್ವಿತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿ ರಾಹುಲ್ ಕುಮಾರ್ ನನ್ನು ಆತನ ಮಾವ ಪ್ರೇಮಶಂಕರ ಝಾ ತೀರ ಹತ್ತಿರದಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಪೋಲಿಸರು ಹೇಳಿದರು.
ಘಟನೆಯ ಬೆನ್ನಲ್ಲೇ ರಾಹುಲ್ ಸಹಪಾಠಿಗಳು ಝಾನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದು, ಸ್ಥಳಕ್ಕೆ ಧಾವಿಸಿದ ಪೋಲಿಸರು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾದ ಆಸ್ಪತ್ರೆಗೆ ಸಾಗಿಸಲಾಗಿದೆ.
ಸುಪೌಲ್ ನಿವಾಸಿ ರಾಹುಲ್ ಕಳೆದ ಎಪ್ರಿಲ್‌ನಲ್ಲಿ ತನ್ನದೇ ಕಾಲೇಜಿನಲ್ಲಿ ಓದುತ್ತಿರುವ ಝಾ ಪುತ್ರಿಯನ್ನು ಪ್ರೇಮ ವಿವಾಹವಾಗಿದ್ದ. ಈ ಅಂತರ್ಜಾತಿ ವಿವಾಹವನ್ನು ಝಾ ವಿರೋಧಿಸಿದ್ದು, ಇದು ಕೊಲೆಗೆ ಕಾರಣವಾಗಿರಬಹುದು ಎಂದು ಪೋಲಿಸರು ತಿಳಿಸಿದರು.
ಸಹಪಾಠಿಯ ಹತ್ಯೆಯನ್ನು ವಿರೋಧಿಸಿ ನರ್ಸಿಂಗ್ ವಿದ್ಯಾರ್ಥಿಗಳು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯ ದ್ವಾರವನ್ನು ನಿರ್ಬಂಧಿಸಿ ಪ್ರತಿಭಟನೆಯನ್ನು ನಡೆಸಿದ್ದು, ಇದರಿಂದಾಗಿ ವೈದ್ಯಕೀಯ ಸೇವೆಗಳು ಅಸ್ತವ್ಯಸ್ತಗೊಂಡಿದ್ದವು.
ಪರಿಸ್ಥಿತಿಯನ್ನು ನಿಯಂತ್ರಿಸಲು ತಾವು ಸೌಮ್ಯ ಬಲಪ್ರಯೋಗ ಮಾಡಿದ್ದಾಗಿ ಪೋಲಿಸರು ತಿಳಿಸಿದರು.
ಆಸ್ಪತ್ರೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು,ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.